ಕೊಡಗು: ನಿಯಂತ್ರಣ ಕಳೆದುಕೊಂಡ ಕಂಟೈನರ್ ಪಲ್ಟಿಯಾಗಿ ವ್ಯಕ್ತಿಯೋರ್ವ ಸಾವಿಗೀಡಾದ ಘಟನೆ ಕೊಡಗು-ಕೇರಳ ಗಡಿ ನಡುವಿನ ಮಾಕುಟ್ಟದಲ್ಲಿ ಸಂಭವಿಸಿದೆ. ಜಾರ್ಖಂಡ್ ಮೂಲದ ಬುದ್ಧರಾಮ್ (55) ಮೃತ ದುರ್ದೈವಿ,
ಅಪಘಾತದಲ್ಲಿ ಕಂಟೈನರ್ ಚಾಲಕ ತೆಲಂಗಾಣದ ನಾಗೇಶ್ವರ ರಾವ್ (30) ಜಾರ್ಖಂಡ್‌ನ ರಾಜೇಂದರ್ (24), ಜಯ ಮಂಗಲ್ (25), ಆಕಾಶ್ (25) ಮತ್ತು ಸುರೇಶ್ (48) ಗಂಭೀರ ಗಾಯಗೊಂಡಿದ್ದು, ಅವರುಗಳನ್ನು ಇರಿಟ್ಟಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಹೈದರಾಬಾದ್‌ನಿಂದ ವೀರಾಜಪೇಟೆ ಮಾರ್ಗವಾಗಿ ಮಾಕುಟ್ಟ ಮೂಲಕ ಕಣ್ಣೂರಿಗೆ ಕೇಬಲ್ ಕಾಮಗಾರಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಸಂದರ್ಭ ಕಂಟೈನರ್ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಮಾಕುಟ್ಟ ಪೊಲೀಸ್ ಔಟ್‌ಪೋಸ್ಟ್ ಬಳಿ ಮಗುಚಿಕೊಂಡಿದೆ. ಅವಘಡದಿಂದ ತೀವ್ರ ರಕ್ತಸ್ರಾವಗೊಳಗಾದ ಬುದ್ಧರಾಮ್ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದಾರೆ.
ಲಾರಿಯಲ್ಲಿ ಸಿಲುಕಿದ್ದ ಉಳಿದ ಐವರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
PublicNext
01/12/2024 05:42 pm