ಬೆಂಗಳೂರು: ಆನ್‌ಲೈನ್‌ನಲ್ಲಿ ಬೆಟ್ಟಿಂಗ್ ಆಡಿ ಸಾಲದ ಸುಳಿಗೆ ಸಿಲುಕಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪ್ರವೀಣ್ (20) ಆತ್ಮಹತ್ಯೆಗೊಳಗಾದ ಯುವಕ. ಈತನ ತಂದೆ ಮುನಿಸ್ವಾಮಿ ಎಂಬುವರು ನೀಡಿದ ದೂರಿನ ಮೇರೆಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೃತನ ಸ್ನೇಹಿತರಾದ ಸೋಮಶೇಖರ್, ಜಯಾ ಹಾಗೂ ಸಲ್ಮಾನ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಟಿ.ಸಿ.ಪಾಳ್ಯ ಮುಖ್ಯರಸ್ತೆಯ ರಾಜೇಶ್ವರಿ ಲೇಔಟ್‌ನಲ್ಲಿ ವಾಸವಾಗಿದ್ದ ಮುನಿಸ್ವಾಮಿ ಕುಟುಂಬ ವಾಸವಾಗಿತ್ತು. ನಾಲ್ಕು ಮಕ್ಕಳ ಪೈಕಿ ಪ್ರವೀಣ್ ಹಿರಿಮಗನಾಗಿದ್ದು, ಪ್ರಥಮ ವರ್ಷದ ಪಿಯುಸಿ ವ್ಯಾಸಂಗವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದ. ಮೈಯೆಲ್ಲಾ ಸಾಲ ಮಾಡಿಕೊಂಡಿದ್ದ ಪ್ರವೀಣ್ ಕಳೆದ ನವೆಂಬರ್ 26ರಂದು ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿತ್ತು ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.
ಈ ಮಧ್ಯೆ ಮಗನ ಸಾವಿಗೆ ಆತನ ಸ್ನೇಹಿತರು ಕಾರಣವೆಂದು ಆರೋಪಿಸಿ ದೂರು ನೀಡಿದ ಮೇರೆಗೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಮೃತನ ಮೊಬೈಲ್ ಪರಿಶೀಲಿಸಿದಾಗ ಆನ್‌ಲೈನ್ ಬೆಟ್ಟಿಂಗ್‌ಗೆ ದಾಸನಾಗಿರುವುದು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಎರಡು ವರ್ಷಗಳಿಂದ ಬೆಟ್ಟಿಂಗ್ ದಾಸನಾಗಿದ್ದ ಪ್ರವೀಣ್, ಮನೆಯವರಿಂದ ಹಣ ಪಡೆದು ಹೂಡಿಕೆ ಮಾಡಿ ಕೈ ಸುಟ್ಟಿಕೊಂಡಿದ್ದ. ಅಲ್ಲದೆ ಬೆಟ್ಟಿಂಗ್‌ಗಾಗಿ ಸ್ನೇಹಿತರಿಂದ ಹಣ ಪಡೆದುಕೊಂಡಿದ್ದ. ಹಣ ವಾಪಸ್ ನೀಡದ ಪರಿಣಾಮ ಸ್ನೇಹಿತರು ಪ್ರಶ್ನಿಸಿ ಗಲಾಟೆ ಮಾಡಿದ್ದರು. ಸಾಲದ ಬಾಧೆಯಿಂದ ತತ್ತರಿಸಿದ್ದ ಪ್ರವೀಣ್ ಆತ್ಮಹತ್ಯೆ ಶರಣಾಗಿದ್ದ. ಮಗನ ಸಾವಿಗೆ ಸ್ನೇಹಿತರೇ ಪ್ರಚೋದನೆ ನೀಡಿದ್ದು ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಯುವಕನ ತಂದೆ ದೂರಿನಲ್ಲಿ ವಿವರಿಸಿದ್ದಾರೆ.
Kshetra Samachara
04/12/2024 07:54 pm