ಚಿಕ್ಕಮಗಳೂರು: ನಗರಸಭೆಯಲ್ಲಿ ಇಂದು ಆಡಳಿತರೂಡ ಬಿಜೆಪಿ ಅಧ್ಯಕ್ಷೆ ಸುಜಾತ ಶಿವಕುಮಾರ್ ವಿರುದ್ಧ ಕಾಂಗ್ರೆಸ್ ಸದಸ್ಯರು ಮುಗಿ ಬಿದ್ದಿದ್ದರು. ತುರ್ತು ಸಾಮಾನ್ಯ ಸಭೆಯನ್ನು ಬಿಲ್ ಪಾಸ್ ಮಾಡಿಕೊಳ್ಳಲು ಕರೆಯಲಾಗಿದೆ ಎಂದು ಪ್ರತಿ ಪಕ್ಷಗಳು ಕೋಲಾಹಲ ಎಬ್ಬಿಸಿದ್ದರು. ಸಭೆ ಆರಂಭ ವಿಳಂಬಕ್ಕೆ ಗರಂ ಆಗಿದ್ದ ಕೈ ಸದಸ್ಯರು ಲೂಟಿ ಲೂಟಿ ಎಂದು ಘೋಷಣೆ ಕೂಗಿದರು. ನಗರದಲ್ಲಿ ಗುಂಡಿ ಮುಚ್ಚಲು 50 ಲಕ್ಷ ಟೆಂಡರ್ ಕರೆದಿದ್ದು ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ. ಅಲ್ಲದೇ ನಗರದಲ್ಲಿ ಕಳಪೆ ತೇಪೆ ಕಾಮಗಾರಿ ನಡೆಯುತ್ತಿದೆ ಲಕ್ಷಾಂತರ ಹಣ ಲೂಟಿ ಮಾಡಲಾಗಿದೆ ಎಂದು ನಗರಸಭೆಯ ವಿರೋಧ ಪಕ್ಷದ ನಾಯಕ ಮುನೀರ್ ಅಹ್ಮದ್ ಆರೋಪಿಸಿದರು. ಈ ವೇಳೆ ಬಿಜೆಪಿ ಸದಸ್ಯ ಮಧುರಾಜ್ ಅರಸ್ ಮತ್ತು ಮುನೀರ್ ನಡುವೆ ಮಾತಿನಚಕಮಕಿ ನಡೆಯಿತು.
ಏರು ಧ್ವನಿಯಲ್ಲಿ ಪರಸ್ಪರ ಇಬ್ಬರೂ ವಾಗ್ವದ ನಡೆಸಿದ್ರು. ಕಾಂಗ್ರೆಸ್ ನ ಎಲ್ಲಾ ಸದಸ್ಯರು ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿದರು. ಪ್ರಶ್ನೆಗೆ ಸಮರ್ಪಕ ಉತ್ತರ ಕೊಡದ ಅಧ್ಯಕ್ಷೆ ಸುಜಾತ ನಡೆ ಖಂಡಿಸಿ ತುರ್ತು ಸಭೆಯನ್ನ ರದ್ದು ಮಾಡಿ ಎಂದು ಕಾಂಗ್ರೆಸ್ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಅಲ್ಲಿಯೇ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ ಸಭಾಂಗಣದಿಂದ ಹೊರನಡೆದರು.
Kshetra Samachara
04/12/2024 04:59 pm