ಬೀದರ್ : ಬಿಜೆಪಿಯ ಅಧಿಕೃತ ವಕ್ಫ್ ಹೋರಾಟ ಇಂದಿನಿಂದ ಆರಂಭವಾಗಲಿದೆ.ಯತ್ನಾಳ್ ಟೀಂ ವಕ್ಫ್ ವಿರುದ್ಧ ಪ್ರವಾಸ ಶುರು ಮಾಡಿದ್ದ ಬೀದರ್ ಜಿಲ್ಲೆಯಿಂದಲೇ ವಿಜಯೇಂದ್ರ ಟೀಂನ ವಕ್ಫ್ ವಿರುದ್ಧದ ಹೋರಾಟಕ್ಕೆ ಚಾಲನೆ ಸಿಗಲಿದೆ.. ಯತ್ನಾಳ್ ಟೀಂ ಹೇಗೆ ಹೋರಾಟ ಮಾಡಿತ್ತೋ, ಯಾವ ಊರಿನಲ್ಲಿ ಸಂವಾದ ಮಾಡಿತ್ತೋ, ಯಾವ ಊರಿನ ರೈತರ ಅಹವಾಲು ಸ್ವೀಕಾರ ಮಾಡಿತ್ತೋ ಅದೇ ಊರಲ್ಲೇ ಅದೇ ದಾಟಿಯಲ್ಲೇ ವಿಜಯೇಂದ್ರ ಟೀಂ ಇಂದು ಸಂಚಾರ ಮಾಡಲಿದೆ.
ಬೆಳಿಗ್ಗೆ 9.30ಕ್ಕೆ ಬೀದರ್‌ಗೆ ಬರಲಿರುವ ವಿಜಯೇಂದ್ರ. ಬೀದರ್‌ನ ಗಾಂಧಿಗಂಜ್ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ವಿಶೇಷ ಪೂಜೆ ಸಲ್ಲಿಸುವ ಮೂಲಕ ವಕ್ಫ್ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ರೈತರು ಮತ್ತು ಸಾರ್ವಜನಿಕ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಗಾಂಧಿಗಂಜ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಬೀದರ್ ತಾಲೂಕಿನ ಚಟನಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟು ರೈತರೊಂದಿಗೆ ಸಂವಾದ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬೀದರ್‌ನಿಂದ ಹುಮನಾಬಾದ್ ಮಾರ್ಗವಾಗಿ ಕಲಬುರಗಿಗೆ ಹೊರಡಲಿದ್ದಾರೆ.
ಕಮಲ ನಾಯಕರ ಹೋರಾಟ ಎರಡು ರೀತಿಯಲ್ಲಿ ನಡೆಯುತ್ತಿದ್ದು, ಬಿಜೆಪಿ ನಾಯಕರಲ್ಲೇ ಹೊಂದಾಣಿಕೆ ಇಲ್ಲ ಎನ್ನುವುದು ಜಗಜ್ಜಾಹೀರು ಆಗುತ್ತಿದೆ. ಬಿಜೆಪಿಯ ಕಾರ್ಯಕರ್ತರು ಮಾತ್ರ ಗೊಂದಲಕ್ಕೆ ಈಡಾಗಿದ್ದಾರೆ. ಡಿಸೆಂಬರ್ 7ರಂದು ನಡೆಯಲಿರುವ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಈ ಎಲ್ಲಾ ಗೊಂದಲಗಳ ಬಗ್ಗೆ ಚರ್ಚೆ ಆಗುವ ಸಾಧ್ಯತೆಯಿದೆ.. ಆದ್ರೆ ಬಿಜೆಪಿಯಲ್ಲಿ ನಡೆಯುತ್ತಿರುವ ನಾನಾ ನೀನಾ ಪ್ರವೃತ್ತಿ ಮಾತ್ರ ನಿಲ್ಲುವ ಸಾಧ್ಯತೆಗಳಿಲ್ಲ. ವಿಜಯೇಂದ್ರ ಇಂದಿನಿಂದ ವಕ್ಫ್ ಆಸ್ತಿ ಅಧ್ಯಯನಕ್ಕೆ ತೆರಳಿದ್ರೆ ಅತ್ತ ದೆಹಲಿಯಲ್ಲಿ ಯತ್ನಾಳ್ ಟೀಂ ವರದಿ ಸಲ್ಲಿಸುವ ಸಾಧ್ಯತೆಗಳಿವೆ.
PublicNext
04/12/2024 09:33 am