ಬೀದರ್: ಮಾಜಿ ಸಚಿವ ಹಾಗೂ ಔರಾದ್ (ಬಿ) ಶಾಸಕ ಪ್ರಭು ಬಿ.ಚವ್ಹಾಣ ಔರಾದ (ಬಿ) ತಾಲ್ಲೂಕಿನ ಹೆಡಗಾಪೂರ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದರು.
ಕಾಮಗಾರಿ ಸ್ಥಳದಲ್ಲಿ ಸಂಚರಿಸಿ ಕೆಲಸ ಹೇಗೆ ನಡೆಯುತ್ತಿದೆ ಎನ್ನುವುದು ತಿಳಿದುಕೊಂಡರು. ಪೂಜೆ ನೆರವೇರಿಸಿ ಎರಡು ತಿಂಗಳು ಕಳೆದರೂ ಇನ್ನೂ ಬುನಾದಿ ಹಂತದ ಕೆಲಸ ನಡೆಯುವುದನ್ನು ಕಂಡು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ವರ್ಷದ ಮೊದಲೇ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಪುನಃ ಸಚಿವರಿಂದ ಚಾಲನೆ ನೀಡಲಾಗಿದೆ. ಇಷ್ಟು ದಿನಗಳಾದರೂ ಕೆಲಸ ಏಕೆ ವಿಳಂಬವಾಗಿದೆ ಎಂದು ಬೇಸರ ಹೊರಹಾಕಿದರು.
ಕಟ್ಟಡಗಳ ಅಡಿಪಾಯ ಕೆಲಸ ಚಾಲ್ತಿಯಲ್ಲಿದ್ದು, ಕಲ್ಲು-ಬಂಡೆಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಕೆಲಸ ಮಂದಗತಿಯಲ್ಲಿ ನಡೆಯುತ್ತಿದೆ. ಅಡಿಪಾಯ ಕೆಲಸದ ನಂತರ ಕಾಮಗಾರಿಯ ವೇಗ ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೆಲಸ ಆಮೆಗತಿಯಲ್ಲಿ ನಡೆಯುತ್ತಿದೆ. ಕ್ಯೂರಿಂಗ್ ಸರಿಯಾಗಿ ಮಾಡುತ್ತಿಲ್ಲವೆಂದು ಗ್ರಾಮಸ್ಥರು ದೂರು ನೀಡುತ್ತಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಇನ್ನಾದರೂ ಕಾಮಗಾರಿಯ ವೇಗ ಹೆಚ್ಚಿಸಬೇಕು. ಅಂದಾಜು ಪತ್ರಿಕೆಯಲ್ಲಿರುವಂತೆ ಕೆಲಸವಾಗಬೇಕು. ಆಕಳು, ಎಮ್ಮೆ, ಕುರಿ, ಮೇಕೆ, ಹಂದಿ ಕೋಳಿ ಘಟಕಗಳು ಮತ್ತು ರೈತರ ತರಬೇತಿ ಕೇಂದ್ರಗಳನ್ನು ಸರಿಯಾಗಿ ನಿರ್ಮಿಸಬೇಕು. ಕ್ಯೂರಿಂಗ್ ಸರಿಯಾಗಿ ಆಗಬೇಕು. ಶ್ವಾನ ಘಟಕ ನಿರ್ಮಿಸುವಂತೆ ತಿಳಿಸಿದ್ದೆ, ಈ ಬಗ್ಗೆ ಪರಿಶೀಲಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳು ನೀಲನಕ್ಷೆಯೊಂದಿಗೆ ಕಾಮಗಾರಿಯ ಕುರಿತು ವಿವರಿಸಿದರು.
ನಂತರ ಶಾಸಕರು ಮಾತನಾಡಿ, ಬಹಳಷ್ಟು ಶ್ರಮ ವಹಿಸಿ ತಾಲ್ಲೂಕಿಗೆ ಯೋಜನೆಯನ್ನು ತಂದಿದ್ದೇನೆ. ಸುಮಾರು 34 ಎಕರೆ ನಿವೇಶನದಲ್ಲಿ 34.49 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಮೊದಲ ಜಾನುವಾರು ತಳಿ ಸಂವರ್ಧನಾ ಕೇಂದ್ರ ಹೆಡಗಾಪೂರನಲ್ಲಿ ನಿರ್ಮಾಣವಾಗುತ್ತಿದೆ. ರೈತರಿಗೆ ಅನುಕೂಲಕರವಾಗಿರುವ ಕಾಮಗಾರಿ ಗುಣಮಟ್ಟದಿಂದ ಆಗಬೇಕು. ನಾನು ಪ್ರತಿ ತಿಂಗಳು ಆಗಮಿಸಿ ಕೆಲಸವನ್ನು ಪರಿಶೀಲಿಸುತ್ತೇನೆ. ಏನಾದರೂ ಲೋಪದೋಷಗಳು ಕಾಣಿಸಿದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಅನುಷ್ಠಾನ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸ್ಥಳದಲ್ಲಿದ್ದು ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರೂ ಕೂಡ ಸ್ಥಳಕ್ಕೆ ಭೇಟಿ ನೀಡುತ್ತಿರಬೇಕು ಎಂದು ಸೂಚಿಸಿದರು.
PublicNext
02/12/2024 06:38 pm