ಕೊಡಗು: ಮನೆ ಮನೆಯಿಂದ ಕಸ ಸಂಗ್ರಹಿಸುತ್ತಿದ್ದ ನಗರಸಭಾ ಚಾಲಕನೊಬ್ಬನ ಮೇಲೆ ತಂದೆ ಮತ್ತು ಮಗ ತೀವ್ರ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ಮಡಿಕೇರಿ ನಗರದ ಸ್ಟುವರ್ಟ್ ಹಿಲ್ ಬಡಾವಣೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಈ ಘಟನೆಯಲ್ಲಿ ನೌಷಾದ್ ಎಂಬ ಚಾಲಕ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದಾರೆ. ಹಲ್ಲೆ ನಡೆಸಿದ ಆರೋಪದಿಂದ ನಗರಸಭಾ ನಿವೃತ್ತ ಸಿಬ್ಬಂದಿ ರಾಮಚಂದ್ರ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಬೆಳಗ್ಗೆ ನೌಷಾದ್ ಪಿಕಪ್ ಆಟೋದಲ್ಲಿ ಕಸ ವಿಲೇವಾರಿ ಕೆಲಸ ಮಾಡುತ್ತಿದ್ದರು. ರಾಮಚಂದ್ರ ಎಂಬುವರ ಮನೆಯಲ್ಲಿದ್ದ ಭಾರೀ ಪ್ರಮಾಣದ ಕಸವನ್ನು ಒಮ್ಮೆಗೆ ಕೊಂಡೊಯ್ಯಲಾಗದು ಎಂದು ನೌಷಾದ್ ತಿಳಿಹೇಳಿದ್ದರು ಎನ್ನಲಾಗಿದೆ. ಸಣ್ಣ ವಾಹನವಾಗಿರುವುದರಿಂದ ಉಳಿದ ಕಸವನ್ನು ನಾಳೆ ಕೊಂಡೊಯ್ಯುವುದಾಗಿಯೂ ಹೇಳಿದ್ದರು. ಇದರಿಂದ ಕೆರಳಿದ ರಾಮಚಂದ್ರ ಅವರು ನೌಷಾದ್‌ನನ್ನು ವಾಹನದಿಂದ ಎಳೆದು, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಹಲ್ಲೆಗೊಳಗಾದ ನೌಷಾದ್ ವಾಹನದಲ್ಲಿದ್ದ ಕಸವನ್ನು ರಾಮಚಂದ್ರ ಮನೆಯ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವರ್ತನೆಗೆ ಕಿಡಿಯಾದ ಮಾಲಾಧಾರಿಯಾಗಿದ್ದ ರಾಮಚಂದ್ರ ಅವರ ಮಗನೂ ಹಲ್ಲೆ ನಡೆಸಿದ್ದಾನೆಂದು ನೌಷಾದ್ ಅರೋಪಿಸಿದ್ದಾನೆ.
ಹಲ್ಲೆಗೊಳಗಾದ ಚಾಲಕ ನೌಶಾದ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಪೌರ ಸೇವಾ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಪೌರಾಯುಕ್ತ ರಮೇಶ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸುರಿಯಲಾಗಿದ್ದ ಕಸವನ್ನು ತೆರವುಗೊಳಿಸಿ ಸ್ಥಳವನ್ನು ಸ್ವಚ್ಛಗೊಳಿಸಲಾಗಿದೆ.
PublicNext
03/12/2024 05:22 pm