ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಯಲ್ಲದಕೆರೆ ಭಾಗದ ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿ ಎಂದು ಆಗ್ರಹಿಸಿ ಯಲ್ಲದಕೆರೆಯಲ್ಲಿ 2 ಗಂಟೆಗಳ ಕಾಲ ಸರ್ಕಾರಿ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಯಲ್ಲದಕೆರೆ ಅಕ್ಕಪಕ್ಕದ ಹಳ್ಳಿಗಳಾದ ಕೆ.ಕೆ.ಹಟ್ಟಿ ಬ್ಯಾರಮಡು, ಚಿಗಳಿಕಟ್ಟೆ, ಹಂದಿಗನಡು ಭಾಗದ ನೂರಾರು ವಿದ್ಯಾರ್ಥಿಗಳು ಪ್ರತಿದಿನವೂ ಯಲ್ಲದಕೆರೆ ಗ್ರಾಮಕ್ಕೆ ಬಂದು ನಗರ ಭಾಗದ ಶಾಲಾ ಕಾಲೇಜುಗಳಿಗೆ ಬರುತ್ತಿದ್ದು, ಬೆಳಿಗ್ಗೆ 8 ರಿಂದ ಹತ್ತು ಗಂಟೆಯವರೆಗೆ ಕಾದರೂ ಬಸ್‌ಗಳು ಬರುತ್ತಿಲ್ಲ. ಬಂದರು ನಿಲ್ಲಿಸುತ್ತಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ಹೋಗಲಾಗದೆ ಪರಿತಪಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹತ್ತಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕವಾಗಿರುವ ಯಲ್ಲದಕೆರೆಗೆ ಹಿರಿಯೂರು, ಚಿತ್ರದುರ್ಗದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬರುತ್ತಿದ್ದು, ಬಸ್ ಗಾಗಿ ಕಾದು ಕಾದು ವಾಪಾಸ್ ಮನೆಗೆ ಹೋದ ನಿದರ್ಶನಗಳು ಸಾಕಷ್ಟಿವೆ. ಬೆಳಿಗ್ಗೆ ಹೊತ್ತು ಸರ್ಕಾರಿ ಬಸ್‌ಗಳು ಬರುತ್ತಿಲ್ಲ. ಬರುವ ಮೈಸೂರು ಮಾರ್ಗದ ಒಂದೆರಡು ಬಸ್‌ಗಳು ಬಂದರೂ ಸಹ ವಿದ್ಯಾರ್ಥಿಗಳನ್ನು ನೋಡಿ ನಿಲ್ಲಿಸುವುದಿಲ್ಲ. ಈ ಕುರಿತು ಈಗಾಗಲೇ ಕೆಎಸ್‌ಆರ್ ಟಿಸಿ ಅಧಿಕಾರಿಗಳಿಗೆ ಲಿಖಿತ ರೂಪದ ಮನವಿ ನೀಡಿದರು ಸಮಸ್ಯೆ ಪರಿಹರಿಸುವ ಕೆಲಸವಾಗಿಲ್ಲ ಎಂದು ದೂರಿದರು.
Kshetra Samachara
03/12/2024 04:27 pm