ಹುಬ್ಬಳ್ಳಿ: ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಬೇಕು. ರಾಜ್ಯದ ಪರವಾಗಿ ಆಡಬೇಕು ಅಂತ ಹಗಲು ರಾತ್ರಿ ಮೈದಾನದಲ್ಲಿ ಬೆವರು ಸುರಿಸುವ, ಶ್ರಮಪಡುವ ಕೋಟ್ಯಾಂತರ ಜನ ಇದ್ದಾರೆ. ಇಂತಹ ಕನಸಗಾರ ಆಸೆಯನ್ನು ನುಚ್ಚು ನೂರು ಮಾಡೋದೆ, ಆಟಗಾರ ಆಯ್ಕೆ ಪ್ರಕ್ರಿಯೆ. ಮೊದಲಿಂದಲೂ ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆಯಲ್ಲಿ ರಾಜಕೀಯ ಕರಿಛಾಯೆ ಅನ್ನೋದು ಇದ್ದೇ ಇದೆ.ಈಗ ಅದು ಜೋನ್ ಮಟ್ಟಕ್ಕೆ ತಲುಪಿದ್ದು, ದೇಶದ ಪರವಾಗಿ ಆಡುವ ಗುರಿಯಿಟ್ಟುಕೊಂಡಿರುವ, ಕ್ರಿಕೆಟ್ ಭಕ್ತರ ಆಸೆಗೆ ಬಾಲ್ಯದಲ್ಲೇ ತಣ್ಣೀರೆರಚುತ್ತಿರುವ ಆರೋಪ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ ಹುಬ್ಬಳ್ಳಿ ಧಾರವಾಡ ವಲಯ ತಂಡದ ಆಯ್ಕೆ ಸಮಿತಿ ಮೇಲೆ ಕೇಳಿಬಂದಿದೆ.
ಒಂದು ಕಡೆ ವೈಟ್ ಆ್ಯಂಡ್ ವೈಟ್ ನಲ್ಲಿ ಆಯ್ಕೆಗೆ ನಿಂತಿರುವ ಮಕ್ಕಳು, ಮಕ್ಕಳ ಭವಿಷ್ಯ ಏನಾಗುತ್ತೊ ಅಂತ ಕಾದುಕುಳಿತಿರುವ ಪಾಲಕರು, ಪಾಲಕರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳ ನೀಡದೆ, ಮುಖ್ಯ ಗೇಟ್ ಗೆ ಬೀಗ ಹಾಕಿ ಹೊರಗೆ ನಿಲ್ಲಿಸಿರುವ ದೃಶ್ಯ.ಈ ದೃಶ್ಯಗಳು ಸದ್ಯ ಹುಬ್ಬಳ್ಳಿ ಕೆಸಿಎ ಮೈದಾನದಲ್ಲಿ ಸಾಮಾನ್ಯವಾಗಿಬಿಟ್ಟಿವೆ.
ಸದ್ಯ ಹುಬ್ಬಳ್ಳಿ ರಾಜ್ ನಗರದ ಕೆಎಸ್‌ಸಿಎ ಮೈದಾನದಲ್ಲಿ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಕಾರವಾರ ಜಿಲ್ಲೆಗಳನ್ನೊಳಗೊಂಡ ಹುಬ್ಬಳ್ಳಿ ಧಾರವಾಡ ವಲಯದ ಜೂನಿಯರ್ ತಂಡದ ಆಟಗಾರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಬರೀ ರಾಜಕೀಯ ನಡೆಯುತ್ತಿದ್ದು, ಆಡಳಿತ ಮಂಡಳಿ ತಮ್ಮ ಕ್ಲಬ್ ಗಳು ಮತ್ತು ತಮಗೆ ಬೇಕಾದ ಮಕ್ಕಳನ್ನು ಮಾತ್ರ ಆಯ್ಕೆ ಮಾಡುತ್ತಿದ್ದು, ಆಯ್ಕೆ ಪ್ರಕ್ರಿಯೆ ಯಾವುದೇ ಪಾರದರ್ಶಕವಾಗಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಇನ್ನೂ ಪಾಲಕರ ಮತ್ತು ಮಕ್ಕಳ ಈ ಆರೋಪವನ್ನು ವಲಯ ಆಡಳಿತ ಮಂಡಳಿ ತಳ್ಳಿಹಾಕಿದೆ. ರಾಜ್ಯ ಕ್ರಿಕೆಟ್ ಅಕಾಡೆಮಿ ನಿಯಮಗಳಂತೆ, ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆಯ್ಕೆ ಸಮಿತಿಗೆ ರಾಜ್ಯ ತಂಡದ ಪದಾಧಿಕಾರಿಗಳು ನೇತೃತ್ವ ವಹಿಸಿದ್ದಾರೆ. ಆಟಗಾರರ ಟ್ಯಾಲೆಂಟ್ ನೋಡಿಯೆ ಆಯ್ಕೆ ಮಾಡಲಾಗುತ್ತದೆ. ಅವರ ಪ್ರತಿಯೊಂದು ಕೌಶಲ್ಯವನ್ನು,ಆಟದ ಗುಣಮಟ್ಟವನ್ನು ಆನ್ ಲೈನ್ ನಲ್ಲಿ ದಾಖಲಿಸಲಾಗುತ್ತದೆ. ಆಯ್ಕೆ ಪ್ರಕ್ರಿಯೆ ನಡೆಯುವಾಗ ಪಾಲಕರ ಅಸಮಾಧಾನದ ಮಾತುಗಳು ಸಹಜ ಎನ್ನುವುದು ಹುಬ್ಬಳ್ಳಿ- ಧಾರವಾಡ ವಲಯ ಅಧ್ಯಕ್ಷರ ಮಾತು.
ಒಟ್ಟಿನಲ್ಲಿ ಕ್ರಿಕೆಟ್ ಆಟವನ್ನು ಧರ್ಮವೆಂದು ಭಾವಿಸುವ ನಮ್ಮ ದೇಶದಲ್ಲಿ, ದೇಶದ ಪರವಾಗಿ ಆಡಬೇಕು, ಈ ಮೂಲಕ ದೇಶದ ಕೀರ್ತಿ ಬಾನೆತ್ತರಕ್ಕೆ ಹಾರಿಸಬೇಕು ಎಂದು ಕೋಟಿ ಕೋಟಿ ಆಕಾಂಕ್ಷಿಗಳು ಕನಸು ಕಾಣುತ್ತಿದ್ದಾರೆ. ಆದರೆ ಇಂತಹವರ ಭವಿಷ್ಯವನ್ನು, ಕನಸನ್ನು ಆಯ್ಕೆ ರಾಜಕೀಯಕ್ಕೆ ಬಲಿಕೊಡುತ್ತಿರುವ ಆರೋಪ ಕೇಳಿ ಬರುತ್ತಿರುವುದು ವಿಪರ್ಯಾಸದ ಸಂಗತಿ.
-ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/11/2024 09:57 am