ಸಾಗರ: ತಾಲ್ಲೂಕಿನ ಆನಂದಪುರದ ಜಾಮಿಯಾ ಮಸೀದಿಯಲ್ಲಿ ಮುಸಲ್ಮಾನರು ಪ್ರಾರ್ಥನೆ ನಂತರ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಅದರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಮಸೀದಿಯ ಧರ್ಮಗುರು ಮೌಲಾನಾ ಮುಫ್ತಿ ಸಫೀರುದ್ದೀನ್ ಪ್ರವಚನ ನೀಡಿದರು. ನಂತರ ಸಾಗರದ ವಕೀಲರಾದ ಮಹಮದ್ ಜಿಕ್ರಿಯಾ ಸಂವಿಧಾನ ರಚನೆಯಾದ ಸಂದರ್ಭ ಹಾಗೂ ಅದರ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ಆಮೇಲೆ ಎಲ್ಲರೂ ‘ಭಾರತ ಪ್ರಜೆಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ವಾಗಿ ರೂಪಿಸುವ, ಭ್ರಾತೃತ್ವದ ಭಾವನೆ ಮೂಡಿಸುವ ದೃಢಸಂಕಲ್ಪ ಮಾಡಿದ್ದೇವೆ’ ಎಂಬ ಸಂವಿಧಾನದ ಪ್ರಸ್ತಾವ ಓದಿದರು.
ಮಸೀದಿ ಆವರಣದಲ್ಲಿ ಮುಸ ಲ್ಮಾನರು ಸಂವಿಧಾನದ ಪ್ರಸ್ತಾವನೆ ಓದುವ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಸಂವಿಧಾನ ಕುರಿತಂತೆ ಅರಿವು ಪಡೆಯಲು ಮುಸಲ್ಮಾನರ ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ರೀತಿಯ ಪರಿಪಾಠ ಬೆಳೆಯಬೇಕು ಎಂಬ ಸದುದ್ದೇಶ ಈ ಕಾರ್ಯಕ್ರಮದ ಹಿಂದೆ ಇದೆ’ ಎಂದು ಮಸೀದಿಯ ಮುಖಂಡರು ತಿಳಿಸಿದ್ದಾರೆ.
“ಟಿಪ್ಪು ಸುಲ್ತಾನ್ ಕಾಲದಿಂದಲೂ ಸಾಮರಸ್ಯ ಮೆರೆದ ಆನಂದಪುರ”: ಸಾಗರ ತಾಲ್ಲೂಕಿನ ಆನಂದಪುರದ ಜಾಮಿಯಾ ಮಸೀದಿ 1632ರಲ್ಲಿ ಕೆಳದಿ ಅರಸ ವೀರಭದ್ರ ನಾಯಕರಿಂದ ನಿರ್ಮಾಣಗೊಂಡಿದೆ. ಆನಂದಪುರದ ಕೋಟೆಯನ್ನು ಬ್ರಿಟಿಷರು ವಶಪಡಿಸಿಕೊಂಡಿದ್ದರು. ವಿಷಯ ತಿಳಿದ ಟಿಪ್ಪು ಸುಲ್ತಾನ್ ತನ್ನ ಸೇನೆಯನ್ನು ಕಳುಹಿಸಿ ಕೋಟೆಯನ್ನು ಮರು ವಶಪಡಿಸಿಕೊಂಡ. ನಂತರ ಮಸೀದಿಗೆ ಬಂದು ಪ್ರಾರ್ಥನೆ ಸಲ್ಲಿಸಿದ. ಇದೆಲ್ಲವೂ ಇತಿಹಾಸದಲ್ಲಿ ದಾಖಲಾಗಿದೆ.
Kshetra Samachara
26/11/2024 11:21 pm