ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಮಗು ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದೆ. ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಗಾಂಧಿಚೌಕ ಪೊಲೀಸರು ಕೊನೆಗೂ ಮಗು ಹಾಗೂ ಕಿಡ್ನಾಪ್ ಮಾಡಿದ್ದ ಖದೀಮನನ್ನು ಪತ್ತೆ ಮಾಡಿದ್ದಾರೆ. ಇತ್ತ ತನ್ನ ಮಗುವನ್ನು ಕಂಡ ತಾಯಿ ಓಡೋಡಿ ಬಂದು ಮಗುವನ್ನು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾಳೆ.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ಬಾಗಲಕೋಟೆ ಮೂಲದ ರಾಮೇಶ್ವರಿ ಪವಾರ್ ಅವರ 1 ವರ್ಷದ ಸಂದೀಪ್ ಎಂಬ ಮಗುವನ್ನು ಅಪರಿಚಿತ ವ್ಯಕ್ತಿಯೊಬ್ಬ ಕಿಡ್ನಾಪ್ ಮಾಡಿ ಪರಾರಿಯಾಗಿದ್ದ. ಇನ್ನು ಜಿಲ್ಲಾಸ್ಪತ್ರೆಯಿಂದ ಮಗು ಮಿಸ್ಸಿಂಗ್ ಎನ್ನುವ ಸುದ್ದಿ ಜಿಲ್ಲೆಯ ಜನರಲ್ಲಿ ಗಾಬರಿ ಹುಟ್ಟಿಸಿತ್ತು.
ಈ ಕುರಿತು ಮಾಹಿತಿ ಪಡೆದ ಗಾಂಧಿ ಚೌಕ ಪೊಲೀಸರ ತಂಡ, ಮಗು ಪತ್ತೆಗೆಂದು ಫೀಲ್ಡಿಗಿಳಿದಿದೆ. ಸತತ ಹುಡುಕಾಟದ ಬಳಿಕ 20 ಗಂಟೆಯ ಬಳಿಕ ಮಗುವನ್ನು ಪತ್ತೆ ಹಚ್ಚುವಲ್ಲಿ ಗಾಂಧಿಚೌಕ ಪೊಲೀಸರು ಯಶಸ್ವಿಯಾಗಿದ್ದಾರೆ. ಮಗುವನ್ನು ಪೊಲೀಸರು ಹಸ್ತಾಂತರಿಸುತ್ತಿದ್ದಂತೆ ತಾಯಿ ರಾಮೇಶ್ವರಿ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಾಳೆ. ಅಲ್ಲದೆ, ಗೋಳೋ ಎಂದು ಕಣ್ಣೀರಿಟ್ಟಿದ್ದಾಳೆ.
ಪ್ರಕರಣವನ್ನು ಬೆನ್ನಟ್ಟಿದ್ದ ಪೊಲೀಸರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಜಿಲ್ಲಾಸ್ಪತ್ರೆ ಸುತ್ತಲಿನ 100ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದರು. ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೊನೆಗು ಕಿಡ್ನಾಪ್ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿ, ಮಗುವನ್ನು ವಶಕ್ಕೆ ಪಡೆದು ತಾಯಿಗೆ ಒಪ್ಪಿಸಿದ್ದಾರೆ.
ಮಗುವನ್ನು ಕಿಡ್ನಾಪ್ ಮಾಡಿ ಸಿಕ್ಕಿಬಿದ್ದ ಆಸಾಮಿಯನ್ನು ದೇವರಹಿಪ್ಪಗಿ ಮೂಲದ ರವಿ ಹರಿಜನ್ ಎಂದು ಗುರುತಿಸಲಾಗಿದೆ.
ಮಗುವನ್ನು ಕಿಡ್ನಾಪ್ ಮಾಡಿ ಕಲಬುರ್ಗಿ ವರೆಗೂ ಹೋಗಿ ಮತ್ತೆ ವಾಪಸ್ ಆಗಿದ್ದಾನೆ ಎನ್ನಲಾಗಿದೆ. ಇತ್ತ ಪೊಲೀಸರ ವಿಚಾರಣೆಯಲ್ಲಿ ಅಚ್ಚರಿಯ ಸಂಗತಿ ಬಿಚ್ಚಿಟ್ಟಿದ್ದಾನೆ.
ಕಳೆದ ಎರಡು ದಿನಗಳಿಂದ ವಾರ್ಡ್ ನಂಬರ್ 123ರ ಬಳಿಯೇ ಸುಳಿದಾಡುತ್ತಿದ್ದ. ಮನೆಯಲ್ಲಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಬಾ ಎಂದು ಕಳಿಸಿದ್ರೆ, ಇಲ್ಲಿ ಕುಡಿದ ಮತ್ತಿನಲ್ಲಿ ಹೊರಳಾಡುತ್ತಿದ್ದನಂತೆ. ಅಲ್ಲದೆ, ಕೆಲವರು ಹೇಳುವಂತೆ ಈ ಮಗುವನ್ನು ನೋಡಿ ನನ್ನ ಮಗುವಿನಂತೆಯೇ ಇದೆ ಎಂದು ಕೆಲವರ ಬಳಿ ಮಾತನಾಡಿದ್ದ ಎನ್ನಲಾಗಿದೆ.
ಇನ್ನು ಪೊಲೀಸ್ ವಿಚಾರಣೆಯಲ್ಲಿ, ಮಗು ಅಳುತ್ತಾ ಇತ್ತು. ಸಂತೈಸಲು ತೆಗೆದುಕೊಂಡೆ. ಬಳಿಕ ನನಗೆ ಕರೆ ಬಂತು, ಆಗ ಮಗುವನ್ನು ಎತ್ತಿಕೊಂಡು ಹೋದೆ. ಬೆಳಿಗ್ಗೆ ಮತ್ತೆ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಬಂದಿದ್ದೇನೆ ಎಂದಿದ್ದಾನೆ.
-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
25/11/2024 07:45 am