ವಿಜಯಪುರ: ನಗರದ ಟಕ್ಕೆಯಲ್ಲಿರುವ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಭಿಕ್ಷುಕರಿಗೆ ಊಟ, ವಸತಿಯೊಂದಿಗೆ ವಿಶೇಷ ತರಬೇತಿ ನೀಡುತ್ತಿದೆ. ಈ ಮೂಲಕ ವಿಜಯಪುರದ ನಿರಾಶ್ರಿತ ಕೇಂದ್ರ ಭಿಕ್ಷುಕರಿಗೆ ಸ್ವಾವಲಂಭಿ ಬದುಕನ್ನು ಕಟ್ಟಿಕೊಡುವುದರೊಂದಿಗೆ ಮಾದರಿ ನಿರಾಶ್ರಿತ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
ಹೌದು. 188 ಭಿಕ್ಷುಕರಿಗೆ ಆಶ್ರಯ ನೀಡುವ ಸಾಮರ್ಥ್ಯ ಹೊಂದಿರುವ ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸದ್ಯ ಮಹಿಳೆಯರು ಸೇರಿದಂತೆ 185 ಜನ ಭಿಕ್ಷುಕರು ಆಶ್ರಯ ಪಡೆದುಕೊಂಡಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಭಿಕ್ಷೆ ಬೇಡುವವರನ್ನು ಬಂಧಿಸಿ ವಾಹನದ ಮೂಲಕ ಕರೆತಂದು ಇಲ್ಲಿ ಆಶ್ರಯ ನೀಡಲಾಗುತ್ತಿದೆ.
ಮೊದಲಿಗೆ ಬಂಜರು ಭೂಮಿಯಾಗಿದ್ದ ಕೇಂದ್ರ ಇದೀಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲದೆ ಕೇಂದ್ರದಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕಲಾಗುತ್ತಿದೆ. ಇರುವ ನೀರಿನ ಸೌಕರ್ಯಗಳನ್ನು ಬಳಸಿ ಹಚ್ಚ ಹಸಿರಾಗಿಸಲಾಗಿದೆ.
ಈ ನಿರಾಶ್ರಿತ ಕೇಂದ್ರದಲ್ಲಿ ಇಬ್ಬರು ಕಾಯಂ ಹಾಗೂ 19 ಜನ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಸಿಬ್ಬಂದಿ ಇದ್ದಾರೆ. ಇಬ್ಬರು ಸ್ಟಾಫ್ ನರ್ಸ್ ಇದ್ದಾರೆ. ಒಬ್ಬರು ವೈದ್ಯಾಧಿಕಾರಿಗಳು ಇದ್ದು, ಭಿಕ್ಷುಕರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲು ಒಬ್ಬರು ವೈದ್ಯಾಧಿಕಾರಿ ಹಾಗೂ ಇಬ್ಬರು ಸ್ಟಾಫ್ ನರ್ಸಗಳಿದ್ದಾರೆ.
ಇನ್ನು ಭಿಕ್ಷುಕರಿಗೆ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ, ಭಜನೆ ಮಾಡಿಸಲಾಗುತ್ತದೆ. ಸ್ವಚ್ಛತೆ ಕಾಪಾಡಲು ಮಾರ್ಗದರ್ಶನ ನೀಡೋದರ ಜೊತೆಗೆ ಲಘು ವ್ಯಾಯಾಮ ಮಾಡಿಸಲಾಗುತ್ತದೆ. ಕೇಂದ್ರದಲ್ಲಿ ಭಿಕ್ಷುಕರ ಸ್ವಚ್ಛತೆ, ಸುರಕ್ಷತೆ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ದೈಹಿಕ ಮತ್ತು ಮಾನಸಿಕವಾಗಿ ಸರಿಯಾಗಿರುವವರಿಗೆ ಹೊಲಿಗೆ ತರಬೇತಿ, ಕಸೂತಿ, ಬಟ್ಟೆ ಬ್ಯಾಗ್, ಕಾಗದದ ಚೀಲ, ಎನ್ವಲಪ್ ಕವರ್ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವದು ವಿಶೇಷ...
ಒಟ್ಟಿನಲ್ಲಿ ಭಿಕ್ಷಾಟನೆ ನಿರ್ಮೂಲನೆಗಾಗಿ ಸರ್ಕಾರವು ಮಾಡೋ ಖರ್ಚು ಇಲ್ಲಿ ಸದುಪಯೋಗವಾಗುತ್ತಿದೆ. ಅಲ್ಲದೇ ಇಲ್ಲಿ ಬಂದ ಭಿಕ್ಷುಕರು ಭಿಕ್ಷಾಟನೆಯಿಂದ ದೂರು ಉಳಿದು ಸ್ವಂತ ಉದ್ಯೋಗ ಪ್ರಾರಂಭಿಸುವಷ್ಟು ಮಟ್ಟಿಗೆ ಸ್ವಾವಲಂಬಿಗಳಾಗುತ್ತಿದ್ದಾರೆ. ಇದಕ್ಕೆ ಬಸವರಾಜ ನಾಟೀಕಾರ ಹಾಗೂ ಕೇಂದ್ರದ ಸಿಬ್ಬಂದಿ ಕಾರ್ಯಕ್ಷಮತೆ ಫಲ ಎಂದರೆ ತಪ್ಪಾಗಲಾರದು.
ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
24/11/2024 05:43 pm