ಕೊಡಗು: ದೇಶ ಕಂಡ ಅಪ್ರತಿಮ ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಶ್ರೀವತ್ಸ ಭಟ್ ಎಂಬ ಹೆಸರಿನ ಖಾತೆಯ ಮೂಲಕ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅಗೌರವ ತೋರಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ನಗರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸುಳ್ಯ ತಾಲ್ಲೂಕಿನ ಹಾಲೆಟ್ಟಿ ಗ್ರಾಮದ ನಿವಾಸಿ,ವಕೀಲ ವೃತ್ತಿಯಲ್ಲಿ ತೊಡಗಿರುವ ವಿದ್ಯಾಧರ ಗೌಡ (66) ಬಂಧಿತ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿರುವುದಾಗಿ ಹೇಳಿದರು. ಇಡೀ ದೇಶವೇ ಗೌರವ ತೋರುವ ಸೇನಾ ನಾಯಕರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವ ಕುರಿತು ಗ್ರೂಪ್ ನ ಅಡ್ಮಿನ್ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗಿದೆ. ಗ್ರೂಪ್‌ನಲ್ಲಿ ಯಾವುದೇ ರೀತಿಯ ಅವಹೇಳನಕಾರಿ ಮತ್ತು ಅವಾಚ್ಯ ಸಂದೇಶಗಳನ್ನು ರವಾನಿಸದಂತೆ ಗ್ರೂಪ್ ನಲ್ಲಿರುವ ಎಲ್ಲರಿಗೂ ಸೂಕ್ತ ತಿಳುವಳಿಕೆ ನೀಡುವಂತೆ ತಿಳಿಸಲಾಗಿದೆ. ಅಲ್ಲದೇ ಈ ರೀತಿಯ ಸಂದೇಶಗಳನ್ನು ಹಂಚಿಕೊಂಡವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
PublicNext
23/11/2024 05:22 pm