ವಿಜಯಪುರ: ನ್ಯಾಯವಾದಿ ಕಾಣೆಯಾಗಿ ಎರಡು ತಿಂಗಳಾಗಿದೆ. ಈ ಕುರಿತು ಪ್ರಕರಣ ದಾಖಲಿಸಿ ಹಲವು ದಿನಗಳೇ ಕಳೆದರೂ ನ್ಯಾಯವಾದಿಯ ಬಗ್ಗೆ ಯಾವುದೇ ಸುಳಿವಿಲ್ಲ. ಕಾಣೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆಯೇ!?
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ನ್ಯಾಯವಾದಿ ಸಂಘದ ಸದಸ್ಯ ಬಸವರಾಜ ಮಹಾದೇವಪ್ಪ ಮಿಣಜಗಿ ಕಾಣೆಯಾಗಿ ಎರಡು ತಿಂಗಳಾಗಿದೆ. ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 17ರಂದು ಪ್ರಕರಣ ದಾಖಲಿಸಲಾಗಿದೆ. ಇಲ್ಲಿಯವರೆಗೂ ಈ ಪ್ರಕರಣದ ಕುರಿತು ಯಾವುದೇ ಮಾಹಿತಿ ಲಭ್ಯವಾಗದೇ ಇರುವ ಹಿನ್ನಲೆಯಲ್ಲಿ ಬಸವನಬಾಗೇವಾಡಿ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ನ್ಯಾಯವಾದಿಗಳು ಕೋರ್ಟ್ ಕಲಾಪದಿಂದ ದೂರ ಉಳಿದು ಡಿವೈಎಸ್ ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇನ್ನೂ ಪೊಲೀಸ್ ಇಲಾಖೆಯು ಕಾಣೆಯಾಗಿರುವ ವ್ಯಕ್ತಿಯನ್ನು ಹುಡುಕುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದ ನ್ಯಾಯವಾದಿಗಳು, ಕೂಡಲೇ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾಣೆಯಾದ ನ್ಯಾಯವಾದಿ ಬಸವರಾಜರನ್ನು ಪತ್ತೆ ಹಚ್ಚಬೇಕು ಎಂದು ಪ್ರಕರಣ ಕುರಿತು ಪೊಲೀಸ್ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಆಗ್ರಹಿಸಿ ಡಿವೈಎಸ್ ಪಿ ಬಲ್ಲಪ್ಪಾ ನಂದಗಾವಿ ಅವರಿಗೆ ಮನವಿ ಸಲ್ಲಿಸಿದರು.
PublicNext
23/11/2024 04:03 pm