ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಕಳೆದ ಮೇ 12ರಂದು ಸಾಪ್ರೀನ್ ವಂಟಿ ಎಂಬ 10 ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಕುಟುಂಬಸ್ಥರು ತಮ್ಮದೆ ಜಮೀನಿನಲ್ಲಿ ಶವವನ್ನು ಹೂತು
ಅಂತ್ಯಕ್ರಿಯೆ ನೆರವೇರಿಸಿದ್ದರು. ಆದರೆ 6 ತಿಂಗಳ ಹಿಂದೆ ತಮ್ಮ ಮಗಳನ್ನ ಕರೆಂಟ್ ಶಾಕ್ ನೀಡಿ ಸಂಬಂಧಿಕರೆ ಕೊಲೆ ಮಾಡಿದ್ದಾರೆ. ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಲ್ಲ ಬದಲಿಗೆ ಇದೊಂದು ವ್ಯವಸ್ಥಿಯ ಕೊಲೆ ಎಂದು ಬಾಲಕಿಯ ತಂದೆ ಸಲೀಂ ವಂಟಿ ಹಾಗೂ ತಾಯಿ ಶಬಾನಾ ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಪೋಷಕರ ಆರೋಪದ ಹಿನ್ನಲೆಯಲ್ಲಿ 6 ತಿಂಗಳ ಬಳಿಕ ವಿಜಯಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ಇಂಡಿ ಉಪವಿಭಾಗಾಧಿಕಾರಿ ಹಬೀದ್ ಗದ್ಯಾಳ ನೇತೃತ್ವದಲ್ಲಿ ಮತ್ತೆ ಬಾಲಕಿಯ ಶವವನ್ನ ಹೊರ ತೆಗೆದು ಶವ ಪರೀಕ್ಷೆ ನಡೆಸಲಾಗಿದೆ.
2 ತಿಂಗಳ ಬಳಿಕ ಅಂದ್ರೆ ಜುಲೈ 7 ರಂದು ಸಹೋದರ ಸಂಬಂಧಿಕ ಮಹಮ್ಮದ್ ವಂಟಿ ಹಾಗೂ ಆತನ ತಾಯಿ ರಜಾಕ್‌ಮಾ ನಿನ್ನ ಮಗಳಿಗೆ ಕರೆಂಟ್ ಕೊಟ್ಟು ಸಾಯಿಸಿದ್ದೇವೆ.
ಅಂದೆ ನಿನ್ನನ್ನು ಕೊಲ್ಲುತ್ತಿದ್ದೇವು. ಆಗಲಿಲ್ಲ ಈಗ ಸಮಯ ಸಿಕ್ಕಿದೆ ಎಂದು ಹೇಳುತ್ತಲೆ ಬಾಟಲಿಯಲ್ಲಿದ್ದ ವಿಷ ಉಣಿಸಿದ್ದಾರಂತೆ. ಬಳಿಕ ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಆದ್ರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಶಾಬಾನಾ ನಡೆದ ಘಟನೆ ವಿವರಿಸಿದ್ದಳು.
ಈ ವೇಳೆ ಮಗಳು ಸತ್ತಿದ್ದು ಹಾವು ಕಚ್ಚಿದ್ದರಿಂದಲ್ಲ ಬದಲಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾರೆ ಎನ್ನುವ ವಿಚಾರವನ್ನ ಶಾಬಾನಾ ಬಾಯ್ಬಿಟ್ಟಿದ್ದಳು.
ಶಾಬಾನಾ ವಿಷ ಪ್ರಾಶನವಾದ ಸಮಯ ಮಾತನಾಡಿದ ವಿಡಿಯೋ ದೃಶ್ಯಗಳನ್ನ ಪತಿ ಸಲೀಂ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ.
ಸದ್ಯ ಮಗಳ ಸಾವಿನ ಬಗ್ಗೆ ಇದ್ದ ಅನುಮಾನ ಹಾಗೂ ಪತ್ನಿಯ ಹತ್ಯೆಗೆ ನಡೆದ ಯತ್ನ ಕುರಿತು ಬೆಂಗಳೂರು ಪೊಲೀಸ್ ಮಹಾನಿರ್ದೇಶಕರಿಗೆ ಸಲೀಂ ದೂರು ನೀಡಿದ್ದಾರೆ.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಮಹಾನಿರ್ದೇಶಕರು ಸಾಪ್ರೀನ್ ಶವ ಪರೀಕ್ಷೆಗೆ ಆದೇಶ ನೀಡಿದ್ದರು. ಈ ಆದೇಶದ ಅನ್ವಯ ಮೊನ್ನೆಯಷ್ಟೆ ಶವ ಪರೀಕ್ಷೆ ನಡೆದಿದೆ. ಶವ ಪರೀಕ್ಷೆಯ ವರದಿ ಬಂದ ಮೇಲೆ ಅಸಲಿ ವಿಚಾರ ಬಯಲಿಗೆ ಬರಲಿದೆ.
ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
16/11/2024 03:40 pm