ಕೊಡಗು: ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು, ದೇವಣಗೇರೆ, ಬೊಳ್ಳರಿಮಾಡು ಕುಕ್ಲುರು, ಮಗ್ಗು, ಕಣ್ಣಗಾಲ ದಲ್ಲಿ ಕಳೆದ ಹಲವು ವರ್ಷಗಳಿಂದ ಕಾಡಾನೆ ಹಾಗೂ ಹುಲಿ ಹಾವಳಿಯಿಂದಾಗಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿತ್ತು.
ಕೆಲವು ದಿನಗಳ ಹಿಂದೆ ಚೆಂಬೆಬೆಳ್ಳೊರು, ಮಗ್ಗು ಗ್ರಾಮಗಳಲ್ಲಿ ಹುಲಿ ಪ್ರತ್ಯಕ್ಷವಾಗಿದ್ದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆಯ ಸುಮಾರು 70 ಮಂದಿಯ ತಂಡ ಹುಲಿ ಪತ್ತೆಗೆ ಕಾರ್ಯಾಚರಣೆ ಮಾಡಿತ್ತು. ಆದರೆ, ಹುಲಿಯನ್ನು ಪತ್ತೆ ಹಚ್ಚುವಲ್ಲಿ ಇಲಾಖೆ ವಿಫಲವಾಗಿತ್ತು.
ದಿನೇ ದಿನೆ ಕಾಡಾನೆಗಳು ಹಾಗೂ ಹುಲಿಯ ಹಾವಳಿ ಕಂಡು ಬೇಸತ್ತ ಗ್ರಾಮಸ್ಥರು, ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು. ಕಾಡುಪ್ರಾಣಿಗಳ ಹಾವಳಿಯಿಂದ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಬೆಳೆಹಾನಿಗೆ ಪರಿಹಾರವನ್ನೂ ನೀಡುವಂತೆ ಅರಣ್ಯ ಅಧಿಕಾರಿಗಳ ಬಳಿ ಮನವಿ ಕೂಡ ಮಾಡಲಾಯಿತು.
ಈ ಸಂದರ್ಭ ಗ್ರಾಮಸ್ಥ ಕರಣ್ ಕಾಳಯ್ಯ ಮಾತನಾಡಿ, ಕಳೆದ ಐದು ವರ್ಷಗಳಿಂದ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ನೆಮ್ಮದಿಯಿಂದ ಜೀವನ ಸಾಗಿಸದಂತೆ ಆಗಿದೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.
PublicNext
21/11/2024 08:27 pm