ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಂಚಾರಿ ಪೊಲೀಸರ ಹೆಸರಿನಲ್ಲಿಯೂ ವಂಚನೆಗೆ ಮುಂದಾದ ಸೈಬರ್ ಕಳ್ಳರು - ಸಾರ್ವಜನಿಕರೇ ಎಚ್ಚರ.!

ಬೆಂಗಳೂರು: ಸಂಚಾರಿ ಪೊಲೀಸ್ ಇಲಾಖೆಯ ಹೆಸರಿನಲ್ಲಿಯೇ ಸಾರ್ವಜನಿಕರಿಗೆ ಕರೆ ಮಾಡಿ ದಂಡ ಪಾವತಿ, ಇನ್ಶುರೆನ್ಸ್, ಹಿಟ್ ಆ್ಯಂಡ್ ರನ್ ಆರೋಪ ಮತ್ತಿತರ ಕಾರಣಗಳನ್ನ ನೀಡಿ ವಂಚನೆಗೆ ಯತ್ನಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ನಕಲಿ ಕರೆಗಳ ಕುರಿತು ಎಚ್ಚರಿಕೆ ವಹಿಸುವಂತೆ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಸಂಚಾರಿ ಪೊಲೀಸರೆಂದು ಸಾರ್ವಜನಿಕರಿಗೆ ಕರೆ ಮಾಡುತ್ತಿರುವ ವಂಚಕರು ನಕಲಿ ದಂಡವನ್ನ ತೋರಿಸಿ ಲಿಂಕ್ ಕಳಿಸಿ ಹಣ ಪಾವತಿಗೆ ಒತ್ತಾಯಿಸುವುದು, ಇನ್ಶುರೆನ್ಸ್ ನೀಡುವುದಾಗಿ ವಂಚಿಸುವುದು, ಹಾಗೂ ನಿಮ್ಮ ವಾಹನ ಹಿಟ್ ಆ್ಯಂಡ್ ರನ್ ಆಗಿರುವುದಾಗಿ ಬೆದರಿಸಿ ವಂಚನೆಗೆ ಯತ್ನಿಸುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿವೆ.

ಸಾರ್ವಜನಿಕರಿಗೆ ಪೊಲೀಸ್ರು ನೀಡಿರುವ ಸೂಚನೆಗಳು..

ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಲಗತ್ತುಗಳನ್ನು ಡೌನೋಡ್ ಮಾಡಬೇಡಿ.

ವೈಯಕ್ತಿಕ ಮಾಹಿತಿಯನ್ನ ಒದಗಿಸಬೇಡಿ. ಅಥವಾ ಹಣ ಪಾವತಿ ಮಾಡಬೇಡಿ.

ಸಂಚಾರಿ ಪೊಲೀಸ್ ಇಲಾಖೆಯನ್ನು ನೇರವಾಗಿ ಸಂಪರ್ಕಿಸುವ ಮೂಲಕ ಕರೆಗಳು ಅಥವಾ ಸಂದೇಶಗಳ ವಿಶ್ವಾಸಾರ್ಹತೆಯನ್ನ ದೃಢಪಡಿಸಿಕೊಳ್ಳಿ‌

ಸಂಚಾರಿ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಅಥವಾ ಸಹಾಯವಾಣಿ ಸಂಖ್ಯೆಗಳಲ್ಲಿ (080-22868550 / 22868444) ದೂರುಗಳನ್ನು ದಾಖಲಿಸಿ

ಮಾಹಿತಿಯನ್ನ ಒದಗಿಸುವ ಮೊದಲು ಅಧಿಕಾರಿಗಳ ಗುರುತುಗಳನ್ನು ಪರಿಶೀಲಿಸಿ

ದಂಡ ಅಥವಾ ಸೇವೆಗಳಿಗಾಗಿ, ದಂಡ ಪಾವತಿಗಾಗಿ ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಿ

ಸಾಫ್ಟ್‌ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್‌ಗಳನ್ನ ನವೀಕೃತವಾಗಿರಿಸಿಕೊಳ್ಳಿ. ಅನುಮಾನಾಸ್ಪದ ಚಟುವಟಿಕೆಗಳನ್ನು ಪೊಲೀಸರಿಗೆ ವರದಿ ಮಾಡುವ ಮೂಲಕ ಸುರಕ್ಷಿತ ಹಾಗೂ ಜಾಗರೂಕರಾಗಿರುವಂತೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ.

Edited By : Nagaraj Tulugeri
PublicNext

PublicNext

21/11/2024 06:04 pm

Cinque Terre

8.9 K

Cinque Terre

0