ಸಾಗರ : ಇಲ್ಲಿನ ಶಾಂತಾವೇರಿ ಗೋಪಾಲಗೌಡ ಕ್ರೀಡಾಂಗಣವನ್ನು ಅಭಿವೃದ್ದಿಪಡಿಸುವಂತೆ ಒತ್ತಾಯಿಸಿ ಗುರುವಾರ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಕಾಗೋಡು ತಿಮ್ಮಪ್ಪ ಅವರು ಶಾಸಕರಾಗಿದ್ದಾಗ ಶಾಂತಾವೇರಿ ಗೋಪಾಲಗೌಡರ ಹೆಸರಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿತ್ತು. 2008ರಲ್ಲಿ ಬಿಜೆಪಿ ನಗರಸಭೆ ಅಧಿಕಾರ ಹಿಡಿದಾಗ ಟಿ.ಡಿ.ಮೇಘರಾಜ್ ಅಧ್ಯಕ್ಷರಾಗಿ ಕ್ರೀಡಾಂಗಣವನ್ನು ಟರ್ಫ್ ಅಂಕಣವಾಗಿ ಪರಿವರ್ತನೆ ಮಾಡಿದ್ದರು. ಇದೀಗ ಕ್ರೀಡಾಂಗಣ ಸಂಪೂರ್ಣ ಹಾಳಾಗಿದ್ದು ಶಾಂತಾವೇರಿ ಗೋಪಾಲಗೌಡರ ಹೆಸರಿಗೆ ಕಳಂಕ ತರುವಂತಿದೆ. ಕಿರಿಯರ, ಹಿರಿಯರ ಹಾಗೂ ಕರ್ನಾಟಕ ರಾಜ್ಯ ಕ್ರಿಕೇಟ್ ಅಕಾಡೆಮಿ ಲೆದರ್ ಬಾಲ್ ಪಂದ್ಯಾವಳಿ ನಡೆಯುತಿತ್ತು. ಇದೀಗ ಕ್ರೀಡಾಂಗಣದಲ್ಲಿ 15ತಿಂಗಳಿನಿಂದ ಯಾವುದೆ ಲೆದರ್ ಬಾಲ್ ಪಂದ್ಯಾವಳಿ ನಡೆದಿಲ್ಲ. ಕ್ರೀಡಾಂಗಣ ಸರಿ ಇಲ್ಲದೆ ಇರುವುದರಿಂದ ಕೆ.ಎಸ್.ಸಿ.ಎ. ಇಲ್ಲಿ ಯಾವುದೇ ಪಂದ್ಯವಾಡಲು ಅವಕಾಶ ಕೊಡುತ್ತಿಲ್ಲ. ಇದರಿಂದ ಕ್ರೀಡಾಪಟುಗಳು ಹಾಸನ, ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಕ್ರೀಡಾಂಗಣಕ್ಕೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಮುಂದಿನ ಹದಿನೈದು ದಿನಗಳಲ್ಲಿ ಕ್ರೀಡಾಂಗಣ ಅಭಿವೃದ್ದಿಪಡಿಸದೆ ಹೋದಲ್ಲಿ ಬಿಜೆಪಿ ನೇತೃತ್ವದಲ್ಲಿ ಕ್ರೀಡಾಂಗಣ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Kshetra Samachara
21/11/2024 02:45 pm