ಹಾವೇರಿಯ ಅನಿಲ್ ಮತ್ತು ಸಂಗೀತಾ ಶೇಟ್ ದಂಪತಿಗೆ ಇಬ್ಬರು ಮಕ್ಕಳು. ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ. ಆದರೆ ಕಳೆದ ವರ್ಷ ಈ ದಂಪತಿಯ ಮಗ ಸಂದೇಶ ಅಪಘಾತದಲ್ಲಿ ಅಸುನೀಗಿದ. ತಮ್ಮ ಮಗ ಅಸುನೀಗಿದ್ದರಿಂದ ತೀವ್ರ ದುಃಖಿತರಾದ ಈ ದಂಪತಿ ಮಗನ ನೆನಪಿಗಾಗಿ ಅವನ ಜನ್ಮದಿನದಂದೇ ಗೋಶಾಲೆ ತೆರೆದಿದ್ದಾರೆ.
ಕಳೆದ ವರ್ಷ ಒಂದು ಹಸುವಿನಿಂದ ಆರಂಭವಾದ ಈ ಗೋಶಾಲೆಗೆ ಇದೀಗ ಒಂದು ವರ್ಷ. ಈ ಗೋಶಾಲೆಯಲ್ಲಿ ಇದೀಗ 38 ಹಸುಗಳಿವೆ. ಹಾವೇರಿ ಸಮೀಪದ ಗಾಂಧಿಪುರ ಗ್ರಾಮದ ಹೊರವಲಯದಲ್ಲಿ ಸಂದೇಶ ಹೆಸರಿನಲ್ಲಿ ಈ ದಂಪತಿ ಗೋಶಾಲೆ ತೆರೆದಿದ್ದಾರೆ.
ದಿನನಿತ್ಯ ಗೋಶಾಲೆಗೆ ಬರುವ ಈ ದಂಪತಿ ಹಸುಗಳಿಗೆ ಮೇವು ಹಾಕುತ್ತಾರೆ. ಹುಲ್ಲು ತಿನ್ನಿಸಿ ನೀರು ಕುಡಿಸುತ್ತಾರೆ. ಸಂಗೀತಾ ಶೇಟ್ ಪ್ರತಿ ಹಸುವಿಗೆ ಹೆಸರು ನಾಮಕರಣ ಮಾಡಿದ್ದು ಆ ಹೆಸರುಗಳಿಂದಲೇ ಹಸುಗಳನ್ನು ಕರೆಯುತ್ತಾರೆ. ಗೋಶಾಲೆಗೆ ಸರ್ಕಾರದಿಂದ ಯಾವುದೇ ಸಹಾಯಧನ ಪಡೆಯದೇ ಪ್ರತಿನಿತ್ಯ ತಾವು ದುಡಿಯುವ ಕಾಯಕದಿಂದ ಬಂದ ಹಣದಿಂದಲೇ ಗೋಶಾಲೆ ನಡೆಸುತ್ತಿದ್ದಾರೆ.
PublicNext
21/11/2024 08:23 am