ದೊಡ್ಡಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸಲು ರಾಜ್ಯ ಸರ್ಕಾರ BPL ಕಾರ್ಡ್ ಗಳ ಪರಿಷ್ಕರಣೆಯನ್ನು ಪ್ರಾರಂಭಿಸಿದ್ದು, ದೊಡ್ಡಬಳ್ಳಾಪುರದಲ್ಲಿ 1350ಕ್ಕೂ ಹೆಚ್ಚು ಕಾರ್ಡ್ ಗಳು ರದ್ದಾಗಿದೆ. ಆದರೆ, ಶ್ರೀಮಂತರ ಒಂದೇ ಒಂದು ಕಾರ್ಡ್ ರದ್ದಾಗಿಲ್ಲ! ರದ್ದಾಗಿರುವ ಅಷ್ಟೂ ಕಾರ್ಡ್ ಗಳು ಕಡುಬಡವರದ್ದಾಗಿದ್ದು, ಸರ್ಕಾರದ ಕ್ರಮದಿಂದಾಗಿ ಬಡವರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ದೊಡ್ಡಬಳ್ಳಾಪುರ ತಾಲೂಕು ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಾರ್ಯಾಲಯ ಉದ್ಘಾಟಿಸಿದ ಅವರು, ನಂತರ ಮಾಧ್ಯಮದೊಂದಿಗೆ ಮಾತನಾಡಿದರು. BPL ಕಾರ್ಡ್ ರದ್ದು ಮಾಡುತ್ತಿರುವ ಸರ್ಕಾರದ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1350 ಹೆಚ್ಚು BPL ಕಾರ್ಡ್ ಗಳು ರದ್ದಾಗಿದೆ. ಐಟಿ, ಜಿಎಸ್ ಟಿ, ಸಾಲ ತೆಗೆದುಕೊಂಡಿರುವ ಮಾನದಂಡದ ಮೇಲೆ BPL ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಆದರೆ, ಈ ಮಾನದಂಡಗಳು ಅವೈಜ್ಞಾನಿಕವಾಗಿದ್ದು, ಇದರಿಂದ ಅರ್ಹ ಬಡವರಿಗೆ ಗೃಹಲಕ್ಷ್ಮೀ ಹಣ ಮತ್ತು ಅಕ್ಕಿ ಸಿಗದಂತೆ ಆಗಿದೆ ಎಂದರು.
ಸರ್ಕಾರದಿಂದ ಸಿಗುವ ಸೌಲಭ್ಯ ಪಡೆಯಲು BPL ಕಾರ್ಡ್ ಅನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ. BPL ಕಾರ್ಡ್ ರದ್ದಾಗಿರುವುದರಿಂದ ವೈದಕೀಯ ನೆರವು, ಸಾಲ, ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯಗಳು ಬಡವರಿಗೆ ಸಿಗುವುದಿಲ್ಲ. ಬೇರೆ ರಾಜ್ಯಗಳಲ್ಲಿ ಸರ್ಕಾರಿ ಸೌಲಭ್ಯ ಪಡೆಯಲು ಮಾನದಂಡವಾಗಿಲ್ಲ. ನಮ್ಮ ರಾಜ್ಯದಲ್ಲಿ BPL ಕಾರ್ಡ್ ಮಾನದಂಡವಾಗಿದ್ದು, ಈ ಕಾರಣದಿಂದ ಅತಿಹೆಚ್ಚು BPL ಕಾರ್ಡ್ ಗಳು ನಮ್ಮ ರಾಜ್ಯದಲ್ಲಿದೆ. ಅಕ್ಕಿಗೆ ಮಾತ್ರ BPL ಕಾರ್ಡ್ ಪರಿಗಣಿಸಿದ್ದಾರೆ ನಮ್ಮ ವಿರೋಧವಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪನವರು ಆಹಾರ ಮಂತ್ರಿಯಾಗಿದ್ದು, ಸಂಡೂರಿನಲ್ಲಿ ಭೇಟಿ ಮಾಡಿದ ವೇಳೆ ಈ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ರಾಜ್ಯ ಸರ್ಕಾರ ಕಡುಬಡವರ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ ಎಂಬ ನಂಬಿಕೆ ಸಚಿವರ ಮೇಲಿದೆ ಎಂದರು.
PublicNext
20/11/2024 10:21 pm