ಬೈಲಹೊಂಗಲ: ಹಿಂದೂ–ಮುಸ್ಲಿಮರ ಭಾವೈಕ್ಯದ ಸಂಕೇತವಾಗಿರುವ ಪಟ್ಟಣದ ಇತಿಹಾಸ ಪ್ರಸಿದ್ಧ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಸೋಮವಾರ ಸಂಜೆ ಸಹಸ್ರಾರು ಭಕ್ತರ ಮಧ್ಯೆ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಜವಳಿ ಕೂಟದಲ್ಲಿ ಮೂರು ಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಮಡಿವಾಳೇಶ್ವರ ಸ್ವಾಮೀಜಿ, ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ, ವೀರಯ್ಯ ಶಾಸ್ತ್ರೀ, ವಿಶ್ವನಾಥ ಹಿರೇಮಠ, ಶಾಸಕ ಮಹಾಂತೇಶ ಕೌಜಲಗಿ, ತಹಸೀಲ್ದಾರ್ ಎಚ್ ಎನ್ ಶಿರಹಟ್ಟಿ, ಜಗದೀಶ ಕೊತಂಬ್ರಿ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಭಕ್ತರು ಹರ ಹರ ಮಹಾದೇವ, ಬಸವೇಶ್ವರ ಮಹಾರಾಜಕೀ ಜೈ ಎಂಬ ಜಯ ಘೋಷಗಳೊಂದಿಗೆ ಆರಂಭವಾದ 52 ಅಡಿ ಎತ್ತರದ ಮಹಾರಥೋತ್ಸವ ಬಜಾರ ರಸ್ತೆ, ಬೆಲ್ಲದ ಕೂಟ, ಉಪ್ಪಿನ ಕೂಟ ನಂತರ ಮೇದಾರ ಗಲ್ಲಿ ಮಾರ್ಗವಾಗಿ 100 ಅಡಿಗೂ ಹೆಚ್ಚು ಎತ್ತರದ ಪ್ರದೇಶದಲ್ಲಿ ನಾಲ್ಕು ತಿರುವುಗಳಲ್ಲಿ 1ಕಿ.ಮೀ. ವರೆಗೆ ಸಾಗುವ ದೃಶ್ಯ ಮನಮೋಹಕವಾಗಿ ಜರುಗಿ ದೇವಸ್ಥಾನಕ್ಕೆ ಬಂದು ತಲುಪಿತು. ಭಕ್ತರು ಕಾರಿಕ, ಬಾಳೆಹಣ್ಣು ಎಸೆದು ಭಕ್ತಿಯಿಂದ ಕೈ ಮುಗಿದರು.
ಜಾತ್ರಾ ಮಹೋತ್ಸವದ ರಥಕ್ಕೆ ಎಪಿಎಂಸಿ ಕಾರ್ಮಿಕ ಬಳಗದವರು, ವಾಲ್ಮೀಕಿ ಯುವಕ ಸಂಘದ ಸದಸ್ಯರು ಬೃಹತ್ ಹೂಮಾಲೆ ತಯಾರಿಸಿ ಅದ್ದೂರಿ ಮೆರವಣಿಗೆಯಲ್ಲಿ ತಂದು ರಥಕ್ಕೆ ಅರ್ಪಿಸಿದರು. ವಿವಿಧ ವಾದ್ಯಮೇಳಗಳು ರಥೋತ್ಸವಕ್ಕೆ ಕಳೆ ತಂದವು.
ಶರೀಫ ನದಾಫ ಪಬ್ಲಿಕ್ ನೆಕ್ಟ್ಸ್ ಬೈಲಹೊಂಗಲ
PublicNext
18/11/2024 10:12 pm