ಬೈಲಹೊಂಗಲ : ರೈತರು ತಮ್ಮ ಫಲವತ್ತಾದ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ಸಾವಯುವ ಗೊಬ್ಬರಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವೆಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಶ್ರೀ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ನಾಡಿನ ಸಮಸ್ತ ರೈತರು, ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಕೃಷಿಕ ಪರಿಕರ ಮಾರಾಟಗಾರರ ಸಂಘ, ರೋಟರಿ ಕ್ಲಬ್ ಬೈಲಹೊಂಗಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್., ಗ್ರಾಮೀಣ ಜಾಗೃತಾ ನಾಗರಿಕ ವೇದಿಕೆ ಇವರುಗಳ ಸಹಯೋಗದಲ್ಲಿ ಮಂಗಳವಾರ ಬೃಹತ್ ಕೃಷಿ ಮೇಳ ಹಾಗೂ ಜಾನುವಾರು ಪ್ರದರ್ಶನ-2024 ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ನಶಿಸುತ್ತಿರುವ ಪಟ್ಟಣದ ಜಾನುವಾರು ಮಾರುಕಟ್ಟೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಾಯಕಲ್ಪ ನೀಡಲು ಸರ್ಕಾರಕ್ಕೆ ಒತ್ತಡ ಹೇರಲಾಗುವದು. ರಾಜ್ಯದಲ್ಲಿಯೇ ಬೈಲಹೊಂಗಲ ಮಾರುಕಟ್ಟೆ ಹೆಸರುವಾಸಿಯಾಗಿತ್ತು. ಅದನ್ನು ಮತ್ತೆ ಅಭಿವೃದ್ದಿ ಪಡಿಸಲು ಮೇಳ ಆಯೋಜಿಸಲಾಗಿದೆ ಎಂದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ನಮ್ಮ ಮುಂದಿನ ಪೀಳಿಗೆ ಕೃಷಿಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಿದಾಗ ಮಾತ್ರ ಜೀವನದ ಬದುಕು, ಬೆಳಕು ಕಾಣಲು ಸಾಧ್ಯವಿದೆ ಎಂದರು.
ಕೃಷಿ ಮೇಳದ ಸಮಿತಿಯ ಮುಖಂಡರು ಇದ್ದರು.
Kshetra Samachara
19/11/2024 07:10 pm