ಬೈಲಹೊಂಗಲ: ಪಟ್ಟಣದ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಶ್ರೀ ವರ್ತಿ ಸಿದ್ಧಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಸಿಬ್ಬಂದಿ, ಜಾತ್ರಾ ಕಮಿಟಿಯಿಂದ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ಸೇರಿದ 25 ಸಾವಿರಕ್ಕೂ ಹೆಚ್ಚು ಕುಸ್ತಿ ಪ್ರೇಮಿಗಳನ್ನು ರಂಜಿಸಿದವು.
ಸಹಕಾರಿಯ ಅಧ್ಯಕ್ಷ ಬಿ.ಎಂ. ಕುಡಸೋಮಣ್ಣವರ, ಉಪಾಧ್ಯಕ್ಷ ಜಿ.ಎಸ್. ಬೋಳನ್ನವರ ಮಾರ್ಗದರ್ಶನದಲ್ಲಿ ಪಟ್ಟಣದ ದೊಡ್ಡ ಕೆರೆ ಪಕ್ಕದ ಬಯಲು ಕುಸ್ತಿ ಕಣದಲ್ಲಿ ಪ್ರಮುಖ 6 ಜೋಡಿ ಸೇರಿ 25 ಕ್ಕೂ ಹೆಚ್ಚು ಜಂಗಿ ನಿಖಾಲಿ ಕುಸ್ತಿ ಪಂದ್ಯಗಳು ಜರುಗಿದವು.
ಎಲ್ಲರ ಬಾಯಲ್ಲೂ ಹೇ ಪೈಲ್ವಾನ ನೀ ಗೆಲ್ಲಬೇಕೋ ಬೇಡೋ, ತಗೋ ಎದುರಾಳಿ ಪೈಲ್ವಾನನ ಎತ್ತಿವಿ ಒಗಿ, ಪಂಚರ ಕುಸ್ತಿ ಸಮಾ ಮಾಡಬೇಡಿ ಎಂಬ ಸಿಳ್ಳೆ, ಚಪ್ಪಾಳೆ, ಕೂಗಾಟದ ಮೂಲಕ ಕುಸ್ತಿ ಪಟುಗಳನ್ನು ಪ್ರೇರೇಪಿಸಲಾಯಿತು. ಕಟ್ಟುಮಸ್ತಾದ ದೇಹದಾರ್ಢ್ಯ ಹೊಂದಿದ ಕುಸ್ತಿಪಟುಗಳು ನೋಡುಗರ ಮೈ ರೋಮಾಂಚನಗೊಳಿಸಿದರು. ಬೆಂಡ ಬಜಾವೋ ಎಂದು ನಿರೂಪಕರು ಹೇಳುತ್ತಿದ್ದಂತೆ ಬೆಂಡ ಅವಾಜದಲ್ಲಿ ಕುಸ್ತಿಗಳು ರಂಗು ಕಂಡುಕೊಂಡವು.
ನೆತ್ತಿ ಮೇಲೆ ಸುಡುತ್ತಿದ್ದ ಬಿರು ಬಿಸಿಲಿನ ಮಧ್ಯೆಯೇ ಆರಂಭವಾದ ಕುಸ್ತಿಪಟುಗಳ ಕಾದಾಟ ಸಂಜೆ ಆಗುತ್ತಿದ್ದಂತೆಯೇ ರಂಗೇರಿತ್ತು. ಜಯಶಾಲಿ ಕುಸ್ತಿ ಪಟುಗಳು ಕುಣಿದು ಕುಪ್ಪಳಿಸಿದರು. 25 ಸಾವಿರಕ್ಕೂ ಹೆಚ್ಚು ಕುಸ್ತಿ ಪ್ರೇಮಿಗಳು ಸಾಕ್ಷಿಯಾದರು.
ಫಲಿತಾಂಶ: ಮಹಾರಾಷ್ಟ್ರ ಕೇಸರಿ ಪೈಲ್ವಾನ್ ಸಿಕಂದರ್ ಶೇಖ್ ಕ್ಷಣಾರ್ಧದಲ್ಲಿ ಪೇಚ್ ಡಾವ್ ಮೂಲಕ ಹಿಂಬದಿಯಾಗಿ ಎತ್ತಿ ಒಗೆದು ಪಂಜಾಬಿನ ಭಾರತ ಕೇಸರಿ ಹಿತೇಶ್ ಕಾಲಾ ಅವರನ್ನು ಚಿತ್ ಗೊಳಿಸಿ ಗೆಲುವಿನ ನಗೆ ಬೀರಿದರು.
PublicNext
22/11/2024 07:48 am