ವಿದೇಶಿ ಪ್ರವಾಸಿಗನ ಮೈಮೇಲೆ ಬಿದ್ದು ಯುವತಿಯೊಬ್ಬಳು ರೀಲ್ಸ್ ಮಾಡಿ ಹುಚ್ಚಾಟ ಮಾಡಿದ ವಿಡಿಯೋ ವೈರಲ್ ಆಗಿದ್ದು ಎಲ್ಲೇಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ರೀಲ್ಸ್ ಮಾಡುವವರು ಸಭ್ಯತೆ, ಸಂಸ್ಕೃತಿ ಎಲ್ಲವನ್ನು ಮರೆತು ಅಸಭ್ಯ ರೀತಿಯಲ್ಲಿ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಇನ್ನೂ ಕೆಲವರಂತೂ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾ ಯಾವುದಕ್ಕೂ ಡೋಂಟ್ ಕೇರ್ ಎನ್ನದೆ ರೀಲ್ಸ್ ಮಾಡುತ್ತಿರುತ್ತಾರೆ. ಇಂತಹ ಮಿತಿಮೀರಿದ ಹುಚ್ಚಾಟಗಳು ನೆಟ್ಟಿಗರ ಕೆಂಗಣ್ಣಿಗೆ ಆಗಾಗ್ಗೆ ಗುರಿಯಾಗುತ್ತಿರುತ್ತವೆ.
ಇದೀಗ ಪ್ರವಾಸಿ ತಾಣಕ್ಕೆ ಭೇಟಿ ಕೊಟ್ಟ ಯುವತಿಯೊಬ್ಬಳು ಬೇಕು ಬೇಕಂತಲೇ ವಿದೇಶಿ ಪ್ರವಾಸಿಗನ ಮೈ ಮೇಲೆ ಬಿದ್ದು ಆತನಿಗೆ ತೊಂದರೆ ಕೊಟ್ಟು ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾಳೆ. ಈಕೆಯ ಈ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಘಟನೆ ಜೈಪುರದ ಆಲ್ಬರ್ಟ್ ಹಾಲ್ ಮ್ಯೂಸಿಯಂ ಮುಂದುಗಡೆ ನಡೆದಿದ್ದು ಎನ್ನಲಾಗುತ್ತಿದೆ. ಈ ವಿಡಿಯೋವನ್ನು venom1s ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ʼವಿದೇಶಿ ಪ್ರವಾಸಿಗನಿಗೆ ಕಿರುಕುಳ ಕೊಟ್ಟ ಈಕೆಗೆ ಯಾವುದೇ ಶಿಕ್ಷೆ ನೀಡಿಲ್ಲ, ಅದುವೇ ಒಬ್ಬ ಪುರುಷ ಯುವತಿಯ ಮೈ ಮೇಲೆ ಬಿದ್ದಿದ್ರೇ ಕಥೆ ಏನಾಗುತ್ತಿತ್ತು?” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ನವೆಂಬರ್ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 82 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೆಂತಾ ಅನುಚಿತ ವರ್ತನೆ ಈಕೆಯದ್ದುʼ ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೊದಲು ಇಂತಹ ಲಜ್ಜೆಗೆಟ್ಟವರನ್ನು ಬಂಧಿಸಬೇಕುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
PublicNext
16/11/2024 05:39 pm