ಬಜಪೆ: ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಕಂಪನಿಯೊಂದರ ಕಲುಷಿತವಾದ ದುರ್ವಾಸನೆಯುಕ್ತ ಕೆಮಿಕಲ್ ನೀರು ಕಾಲುವೆಗೆ ಹರಿದ ಪರಿಣಾಮ ಬಜಪೆ ಪರಿಸರದ ಕೊಂಚಾರ್, ಮರವೂರು ಪ್ರದೇಶಗಳ ಜನರಿಗೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಮಿಕಲ್ ನೀರು ಹರಿದ ಪರಿಣಾಮ ಸಮೀಪದ ತೋಡು,ಕಾಲುವೆಗಳಲ್ಲಿನ ಮೀನುಗಳು ಸತ್ತುಬಿದ್ದಿದ್ದು,ಮಾತ್ರವಲ್ಲದೆ ಮರವೂರಿನ ಫಲ್ಗುಣಿ ನದಿಗೂ ಹರಿಯುವಂತಹ ಭೀತಿ ಎದುರಾಗಿದೆ.ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಕಂಪೆನಿಯೊಂದರಿಂದ ದುರ್ವಾಸನೆಯುಕ್ತ ನೀರು ಇಲ್ಲಿನ ತೋಡು ಹಾಗೂ ಕಾಲುವೆಗಳಿಗೆ ಹರಿಯುತ್ತಿದೆ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಬಜಪೆ ನಾಗರೀಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ ಅವರು ಸಂಬಂಧಪಟ್ಟ ಬಜಪೆ ಪಟ್ಟಣ ಪಂಚಾಯತ್ ಇತ್ತ ಕಡೆ ಗಮನಹರಿಸಿ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು.ಆತಂಕದ ಪರಿಸ್ಥಿತಿಯಲ್ಲಿರುವ ಗ್ರಾಮದ ಜನರಿಗೆ ಈ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಬೇಕು.ಇಲ್ಲವಾದಲ್ಲಿ ಎಂಎಸ್ ಇಝಡ್ ನ ಗೇಟಿನ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕಲುಷಿತ ನೀರು ಹರಿಯುತ್ತಿರುವ ಪರಿಣಮ ಈ ನೀರು ಮರವೂರು ನದಿಗೂ ಸೇರಿದರೆ ಮಾತ್ರ ಆತಂಕ ತಪ್ಪಿಲ್ಲ.ಮರವೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಮ್ ನಿಂದ ಬಜಪೆ ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯತ್ ಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.ಇದರಿಂದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಆತಂಕದ ಪರಿಸ್ಥಿತಿ ನಿರ್ಮಾಣವಾಗ ಬಹುದು.ಈ ಬಗ್ಗೆ ಇತ್ತ ಕಡೆ ಸಂಬಂಧಪಟ್ಟ ಪಂಚಾಯತ್,ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪರಿಶೀಲನೆ ನಡೆಸಿ ಕಂಪೆನಿಯ ವಿರುದ್ದ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
13/11/2024 10:33 pm