ಮಂಗಳೂರು: ಇನ್ನು ಮುಂದೆ ದೇಶದ ಎಲ್ಲಾ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ತಾಯಂದಿರು ಕೇಂದ್ರ ಸರಕಾರದ ಹೊಸ ಯೋಜನೆಯನ್ವಯ ಪ್ರತೀ ವಾರ ಕರೆಯೊಂದನ್ನು ಸ್ವೀಕರಿಸಲಿದ್ದಾರೆ. ಕಿಲ್ಕಾರಿ ಎಂಬ ಹೊಸ ಯೋಜನೆಯಂತೆ ಬರುವ ಈ ಕರೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...
ಕೇಂದ್ರ ಸರಕಾರವು 4 ತಿಂಗಳು ಮೇಲ್ಪಟ್ಟ ಗರ್ಭಿಣಿ ಹಾಗೂ ಒಂದು ವರ್ಷದೊಳಗಿನ ಮಕ್ಕಳಿಗೆ ಕುಟುಂಬದ ಸದಸ್ಯರು ವಹಿಸಬೇಕಾದ ಕಾಳಜಿ, ಲಸಿಕೆ ಒದಗಿಸುವಿಕೆ ಹಾಗೂ ಇತರ ತಪಾಸಣೆಗೆ ಸಹಕಾರಿಯಾಗುವಂತೆ ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ವಿನೂತನ ಕಾರ್ಯಕ್ರಮ ಕಿಲ್ಕಾರಿ ಮೊಬೈಲ್ ಕರೆ ಸೇವೆಯನ್ನು ಆರಂಭಿಸಿದೆ.
ಕಿಲ್ಕಾರಿಯು ಗರ್ಭಿಣಿಯರು, ತಾಯಂದಿರು ಮತ್ತು ಅವರ ಕುಟುಂಬಗಳಿಗೆ ಸಂತಾನೋತ್ಪತ್ತಿ, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಸಕಾಲಿಕ, ನಿಖರವಾದ ಮತ್ತು ಸಂಬಂಧಿತ ಮಾಹಿತಿಯನ್ನು ಒದಗಿಸುವ ಮೊಬೈಲ್ ಆರೋಗ್ಯ ಶಿಕ್ಷಣ ಸೇವೆಯಾಗಿದೆ.
ಆರ್‌ಸಿಎಚ್ ಪೋರ್ಟಲ್‌ನಲ್ಲಿ ದಾಖಲಾಗಿರುವ ಗರ್ಭಿಣಿಯರ ಮೊಬೈಲ್‌ಗೆ ನೇರವಾಗಿ ಆಡಿಯೋ ಮಾಹಿತಿಯನ್ನು ತಲುಪಿಸಲು ಕಿಲ್ಕಾರಿ ಪ್ರಸ್ತುತ ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್ ತಂತ್ರಜ್ಞಾನವನ್ನು ಬಳಸಲಾಗಿದೆ.
ಗರ್ಭಧಾರಣೆಯಾದ ಎರಡನೇ ತ್ರೈಮಾಸಿಕದಿಂದ ಮಗುವಿಗೆ 1 ವರ್ಷದವರೆಗೆ ತಾಯಿ ಮತ್ತು ಮಗುವಿನ ಸಾವು ಸಂಭವಿಸುವುದನ್ನು ತಪ್ಪಿಸಲು ನಿರ್ಣಾಯಕ ಅವಧಿಯನ್ನು ಕರೆಗಳು ಒಳಗೊಳ್ಳುತ್ತವೆ. 01244588000ರ ನಂಬರ್‌ನಲ್ಲಿ ಕರೆ ಮಾಡಿ ಪಾಲಕರೊಂದಿಗೆ ಮಾತನಾಡಲಾಗುವುದು. ಕುಟುಂಬದ ಸದಸ್ಯರು ತಾಯಿ-ಮಗುವಿನ ಸುಸ್ಥಿರ ಆರೋಗ್ಯಕ್ಕಾಗಿ ಸಹಕರಿಸಬೇಕು. ಒಂದು ವೇಳೆ ಕರೆ ಸ್ವೀಕರಿಸಲು ಅಸಾಧ್ಯವಾದಲ್ಲಿ ಪುನಃ ಆರೋಗ್ಯ ಮಾಹಿತಿ ಪಡೆಯಲು ಇನ್‌ಬಾಕ್ಸ್ ಸಂಖ್ಯೆ 14423ಕ್ಕೆ ಕರೆ ಮಾಡಬಹುದಾಗಿದೆ.
PublicNext
13/11/2024 06:01 pm