ನವಲಗುಂದ: ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಯಾದ ಬೆಳೆ ವೀಕ್ಷಣೆಗಾಗಿ ರಾಜ್ಯ ಸರ್ಕಾರ ನೇಮಿಸಿದ ಅಧಿಕಾರಿಗಳ ತಾಲೂಕಿನ ವಿವಿಧೆಡೆ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆ ರೈತರಿಗೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲು ಶಾಸಕ ಎನ್.ಎಚ್.ಕೋನರಡ್ಡಿ ಒತ್ತಾಯಿಸಿದರು.
ತಾಲೂಕಿನ ಯಮನೂರ ಗ್ರಾಮದ ಬೆಣ್ಣಿಹಳ್ಳದ ಹತ್ತಿರದ ರೈತ ನಾಗಪ್ಪ ಚುಳಕಿ ಅವರ ಜಮೀನಿನಲ್ಲಿ ಬೆಳೆದ ಬೆಳೆ ವೀಕ್ಷಿಸಲಾಯಿತು. ಈ ವೇಳೆ ಮಾತನಾಡಿದ ತಂಡದ ಮುಖ್ಯಸ್ಥೆ, ಉಡುಪಿಯ ಅಪರ ಜಿಲ್ಲಾಧಿಕಾರಿ ಮಮತಾ ಗೌಡರ, ನಿರಂತರವಾಗಿ ಸುರಿದ ಮಳೆಯಿಂದ ಗೋವಿನಜೋಳ, ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಶೇಂಗಾ ಸೇರಿದಂತೆ ತಾಲೂಕಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸೇರಿ 13,326 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಅದರ ಪ್ರಕಾರ ಹಾನಿ ವೀಕ್ಷಣೆಗೆ ಆಗಮಿಸಿರುವುದಾಗಿ ತಿಳಿಸಿದರು.
ಅಧ್ಯಯನ ತಂಡದ ಸದಸ್ಯೆ, ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ ಮಾತನಾಡಿ, ಯಮನೂರ, ತಿರ್ಲಾಪುರ, ಗುಮ್ಮಗೋಳ ಹಾಗೂಶಿರೂರ ಗ್ರಾಮದಲ್ಲಿ ಬೆಳೆ ವೀಕ್ಷಣೆ ಮಾಡಲಾಯಿತು. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಅಧಿಕಾರಿಗಳ ತಂಡ ರಾಜ್ಯ ಸರ್ಕಾರಕ್ಕೆ ವರದಿ ನೀಡಿ ರೈತರಿಗೆ ಪರಿಹಾರ ಸಿಗುವಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ತಹಸೀಲ್ದಾರ್‌ಗಳಾದ ಸುಧೀರ ಸಾವಕಾರ, ಮಂಜುನಾಥ ದಾಸಪ್ಪನವರ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ರೈತ ಮುಖಂಡರಾದ ಶಂಕರ ಅಂಬಲಿ, ಆರ್.ಡಿ. ನಡುವಿನಮನಿ, ಸುಭಾಶ್ಚಂದ್ರಗೌಡ ಪಾಟೀಲ, ಪ್ರಭಾಕರ ಮೋಹಿತೆ, ಚನ್ನಬಸಪ್ಪ ಪಡೆಸೂರ, ಪಾಂಡುರಂಗ ಮೊಹಿತೆ ಸೇರಿದಂತೆ ಹಲವರಿದ್ದರು.
Kshetra Samachara
13/11/2024 03:53 pm