ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮರಕುಂಬಿಯ 97 ಅಪರಾಧಿಗಳಿಗೆ ಜಾಮೀನು ನೀಡಿದ ಧಾರವಾಡ ಹೈಕೋರ್ಟ್

ಧಾರವಾಡ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಆದರೆ, 98 ಜನ ಅಪರಾಧಿಗಳ ಪೈಕಿ 97 ಜನರಿಗೆ ಇದೀಗ ಧಾರವಾಡದ ಹೈಕೋರ್ಟ್ ವಿಭಾಗೀಯ ಪೀಠ ಜಾಮೀನು ನೀಡಿದೆ.

ಕೊಪ್ಪಳದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ 97 ಜನ ಅಪರಾಧಿಗಳು ಅಕ್ಟೋಬರ್ 28 ರಂದು ಧಾರವಾಡ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಟಿ.ಜಿ.ಶಿವಶಂಕರೇಗೌಡ ಹಾಗೂ ಶ್ರೀನಿವಾಸ ಹರಿಶಂಕರ್ ಅವರಿದ್ದ ವಿಭಾಗೀಯ ಪೀಠ 97 ಜನ ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಕೊಪ್ಪಳದ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ತಡೆ ನೀಡಿರುವ ಧಾರವಾಡ ಹೈಕೋರ್ಟ್, ಪ್ರಕರಣದ ಎ1 ಆರೋಪಿ ಮಂಜುನಾಥ ಎಂಬುವವರನ್ನು ಹೊರತುಪಡಿಸಿ ಉಳಿದ ಎಲ್ಲ ಅಪರಾಧಿಗಳಿಗೆ ಜಾಮೀನು ನೀಡಿದೆ. ಮಂಜುನಾಥ ಜಾಮೀನಿಗೆ ಅರ್ಜಿ ಹಾಕದೇ ಇದ್ದಿದ್ದರಿಂದ ಆತನಿಗೆ ಜಾಮೀನು ದೊರೆತಿಲ್ಲ.

ಪ್ರಕರಣದ ಆರೋಪಿಗಳು ಹತ್ತು ವರ್ಷಗಳಿಂದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ. ಘಟನೆ ಹಾಗೂ ಎಫ್‌ಐಆರ್ ದಾಖಲಾದ ಸಮಯದ ವ್ಯತ್ಯಾಸ ಮತ್ತು ಆರೋಪಿಗಳ ಗುರುತು ಪತ್ತೆ ಮಾಡಿಲ್ಲ ಎಂಬ ಅಂಶಗಳನ್ನು ಹೈಕೋರ್ಟ್ ಪ್ರಮುಖವಾಗಿ ಪರಿಗಣಿಸಿದೆ. ಪ್ರತಿಯೊಬ್ಬರಿಗೂ 50 ಸಾವಿರ ರೂಪಾಯಿ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ನೀಡುವಂತೆ ಹೈಕೋರ್ಟ್ ಷರತ್ತು ವಿಧಿಸಿದೆ. 2014 ರಲ್ಲಿ ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ಈ ಗಲಾಟೆ ನಡೆದಿತ್ತು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/11/2024 03:25 pm

Cinque Terre

50.72 K

Cinque Terre

7

ಸಂಬಂಧಿತ ಸುದ್ದಿ