ಬೆಂಗಳೂರು : ನ್ಯಾಯಾಲಯಗಳು ಕೇಂದ್ರ ಸರ್ಕಾರದ ಮಾತು ಕೇಳುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ವಿಜಯೇಂದ್ರ ಸೋತಾಗ EVM ಹಾಗೂ ಚುನಾವಣಾ ಆಯೋಗವನ್ನೇ ಅನುಮಾನಿಸುವುದು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ದೂಷಿಸುವುದು ಕಾಂಗ್ರೆಸ್ ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಬಗೆ.
ಆದರೀಗ ಮುಡಾ ಹಗರಣದ ಕಪ್ಪು ಮಸಿ ಬಳಿದುಕೊಂಡು ನ್ಯಾಯಾಂಗ ವ್ಯವಸ್ಥೆಯಿಂದ ಅಪರಾಧಿ ಸ್ಥಾನದಲ್ಲಿ ಇರುವ ಭಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುಪುತ್ರ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಕೆಲ ಕೋರ್ಟ್‌ಗಳು ಕೇಂದ್ರ ಸರ್ಕಾರದ ಮಾತು ಕೇಳುತ್ತಿವೆ ಎಂದು ಹೇಳುವ ಮೂಲಕ ದೇಶದ ಘನ ನ್ಯಾಯಾಂಗ ವ್ಯವಸ್ಥೆಯನ್ನೇ ಅವಮಾನಿಸಿದ್ದಾರೆ.
ಜನಪ್ರತಿನಿಧಿಗಳ ನ್ಯಾಯಾಲಯ ತಮ್ಮ ತಂದೆಯ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ, ತನಿಖೆಗೆ ಆದೇಶ ನೀಡಿದ ಕಾರಣಕ್ಕೆ ಹತಾಶೆಯಿಂದ ನ್ಯಾಯಾಂಗ ವ್ಯವಸ್ಥೆಯನ್ನೇ ಅನುಮಾನಿಸಿ ನಿಂದಿಸುವ ಹೇಳಿಕೆ ನೀಡಿರುವ ಯತೀಂದ್ರ ಅವರು ತಾವೊಬ್ಬ ಮುಖ್ಯಮಂತ್ರಿಗಳ ಪುತ್ರ ಎಂಬ ಹಮ್ಮಿನಿಂದ ಮಾತನಾಡಿದಂತಿದೆ.
ವಿಧಾನ ಪರಿಷತ್ ಸದಸ್ಯ ಸ್ಥಾನದ ಘನತೆಯನ್ನೂ ಅವರು ಕಳೆದಿದ್ದಾರೆ, ಈ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ, ಸಂವಿಧಾನ ಅನುಮಾನಿಸಿ, ಅಪಮಾನಿಸಿದವರಿಗೆ ಕಾಲವೇ ಉತ್ತರ ಹೇಳಿದೆ.ಕಾಲಾಯ ತಸ್ಮೈ ನಮಃ! ಎಂದು ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
PublicNext
13/11/2024 03:13 pm