ಬೆಂಗಳೂರು : ಶಾಸಕರಿಗೆ ಬಿಜೆಪಿ 50 ಕೋಟಿ ಆಫರ್ ಮಾಡ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಈ ಕುರಿತು ಟ್ವಿಟ್ ಮಾಡಿ ಕಿಡಿ ಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , ಸಿದ್ದರಾಮಯ್ಯನವರು ಬಹುಶಃ ನಿಮ್ಮ ಶಾಸಕರ ಮೇಲೆ ನೀವು ವಿಶ್ವಾಸವನ್ನು ಕಳೆದುಕೊಂಡಂತೆ ಕಾಣುತ್ತಿದೆ.
ಅದಕ್ಕಾಗಿಯೇ ₹50 ಕೋಟಿಗೆ ಅವರು ಮಾರಾಟವಾಗುತ್ತಿದ್ದಾರೆ ಎಂಬ ಕಪೋಕಲ್ಪಿತ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದು ನೀವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಶಾಸಕರನ್ನು ಮಾರಾಟದ ವಸ್ತುಗಳಂತೆ ವ್ಯಾಖ್ಯಾನಿಸಿ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ. ನಿಮ್ಮ ಈ ಹೇಳಿಕೆ ರಾಜ್ಯದ ಕಾಂಗ್ರೆಸ್ ಘಟಕವು ಶಾಸಕರುಗಳನ್ನು ಅಂಕೆಯಲ್ಲಿ ಇಟ್ಟುಕೊಳ್ಳಲು ಹಾಗೂ ನಿಮ್ಮನ್ನು ಸುತ್ತುವರೆದಿರುವ ಭ್ರಷ್ಟಾಚಾರದ ಹಗರಣಗಳನ್ನು ಮುಚ್ಚಿಕೊಳ್ಳಲು ಹೆಣೆದಿರುವ ಹತಾಶೆಯ ಸುಳ್ಳಿನ ಕಂತೆ ಎನ್ನುವುದು ಕನಿಷ್ಠ ರಾಜಕೀಯ ಜ್ಞಾನ ಇರುವವರಿಗೂ ಅರಿವಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಸುಳ್ಳು, ಭಂಡತನ, ಕಪೋಕಲ್ಪಿತ ಸುದ್ದಿ ಹರಿಬಿಡುವುದು ನಿಮ್ಮ ಹಾಗೂ ನಿಮ್ಮ ಪಕ್ಷದ ನಿತ್ಯ ಮಂತ್ರವಾಗಿದೆ. ನೀವು ನಡೆಸಿರುವ ಸರಣಿ ಹಗರಣಗಳ ಹಿನ್ನೆಲೆಯ ಉರುಳು ಬಿಗಿಯಾಗುತ್ತಿರುವಷ್ಟೂ ನಿದ್ದೆಗೆಡುತ್ತಿರುವ ನಿಮ್ಮ ಮನಸ್ಸು ಅಸ್ಥಿರಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಚಲಿತ ಬೆಳವಣಿಗೆಯನ್ನು ವಿಚಲಿತಗೊಳಿಸುವುದು ಹೇಗೆ ಎಂಬುದರತ್ತಲೇ ನೀವು ನಿಗಾ ಇಟ್ಟಿರುವಂತೆ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ನಿಮ್ಮದೇ ಸರ್ಕಾರವಿದೆ, ನಿಮ್ಮದೇ ತನಿಖಾ ಸಂಸ್ಥೆಗಳಿವೆ, ₹50 ಕೋಟಿ ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸುವುದು ನಿಮ್ಮ ನೈತಿಕ ಜವಾಬ್ದಾರಿಯಾಗಿರುತ್ತದೆ. ಇಲ್ಲದಿದ್ದರೆ ನಿಮ್ಮ ಹೇಳಿಕೆ ಪುಡಾರಿಗಳು ನೀಡುವ ಬಾಲಿಶ ರಾಜಕೀಯ ಹೇಳಿಕೆಯಾಗುತ್ತದೆಯಷ್ಟೇ ಎಂದು ಎಚ್ಚರಿಸಿದ್ದಾರೆ.
PublicNext
14/11/2024 01:33 pm