ಬೆಂಗಳೂರು : 50 ಶಾಸಕರನ್ನು ಖರೀದಿಸಲು ಬೇಕಾದ 2,500 ಕೋಟಿ ರೂ. ಎಲ್ಲಿದೆ, ಯಾವ ವ್ಯಕ್ತಿ ಖರೀದಿಸಲು ಮುಂದಾಗಿದ್ದಾರೆಂದು ಸಿಎಂ ಸಿದ್ದರಾಮಯ್ಯ ತಿಳಿಸಬೇಕು. ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದ್ದು, ಅದಕ್ಕಾಗಿ ಶಾಸಕರಿಗೆ ದರ ನಿಗದಿ ಮಾಡಿದ್ದಾರೆ. ಗುಪ್ತಚರ ವಿಭಾಗ ಅವರ ಕೈಯಲ್ಲೇ ಇದ್ದು, ಎಲ್ಲಿ ಯಾರಿಗೆ ಎಷ್ಟು ಹಣ ನೀಡಲಾಗಿದೆ ಎಂಬ ವರದಿಯನ್ನು ಅವರು ತರಿಸಿಕೊಳ್ಳಬಹುದಿತ್ತು. ತಮ್ಮ ಸ್ಥಾನ ಅಸ್ಥಿರವಾಗಿರುವುದರಿಂದ ಹೀಗೆ ಮಾತಾಡಿದ್ದಾರೆ ಎಂದು ಆರೋಪಿಸಿದರು.
ಹೊಸ ಸರ್ಕಾರ ರಚನೆಯಾಗಲು 50 ಕ್ಕೂ ಅಧಿಕ ಶಾಸಕರು ಪಕ್ಷ ಬಿಟ್ಟು ಹೊರಗೆ ಬರಬೇಕಾಗುತ್ತದೆ.
ಆ ಲೆಕ್ಕದಲ್ಲೂ ಅವರು ತಪ್ಪಾಗಿ ಹೇಳಿದ್ದಾರೆ ಎಂದರು. 50 ಶಾಸಕರಿಗೆ ತಲಾ 50 ಕೋಟಿ ರೂ. ಎಂದರೆ 2,500 ಕೋಟಿ ರೂ. ಬೇಕಾಗುತ್ತದೆ. ಇಷ್ಟೊಂದು ಹಣ ಯಾರ ಬಳಿ ಇದೆ? ಹರಾಜಾಗುವ ಶಾಸಕರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲಿ. 2,500 ಕೋಟಿ ರೂ. ಬೇನಾಮಿ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಕೂಡಲೇ ವಶಕ್ಕೆ ಪಡೆಯಬೇಕು. ಖರೀದಿ ಮಾಡುವ ಆ ವ್ಯಕ್ತಿಯನ್ನು ಬಂಧಿಸಬೇಕು. ಜಾರಿ ನಿರ್ದೇಶನಾಲಯದ ಮುಖ್ಯಮಂತ್ರಿಯನ್ನು ವಿಚಾರಣೆ ಮಾಡಿ ಈ ಕುರಿತು ಮಾಹಿತಿ ಪಡೆಯಬೇಕು ಎಂದು ಆಗ್ರಹಿಸಿದರು.
PublicNext
14/11/2024 10:01 pm