ಕಾರ್ಕಳ: ಕಾರ್ಕಳ ತಾಲೂಕಿನ ಬೈಲೂರಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚಿಸಿರುವ ಪ್ರಕರಣದ ಆರೋಪಿ ಶಿಲ್ಪಿ ಕೃಷ್ಣ ನಾಯಕ್ ಬಂಧನವಾಗಿದೆ. ಇದರೊಂದಿಗೆ ಈ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ.
ಆರೋಪಿ ಕೃಷ್ಣ ನಾಯಕ್ ‘ಕೃಷ್ ಆರ್ಟ್ ವರ್ಲ್ಡ್’ ಎಂಬ ಸಂಸ್ಥೆಯ ಮೂಲಕ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂಪಾಯಿ ಹಣ ಪಡೆದುಕೊಂಡಿದ್ದರು. ನಂತರ ಆರೋಪಿ ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ ನಲ್ಲೂರಿನ ಕೃಷ್ಣ ಶೆಟ್ಟಿ ಜೂನ್ ತಿಂಗಳಲ್ಲಿ ದೂರು ನೀಡಿದ್ದರು. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಆರೋಪಿ ಕೃಷ್ಣ ನಾಯಕ್, ಈ ಪ್ರಕರಣವನ್ನು ರದ್ಧುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತ್ತು. ಬಳಿಕ ಆರೋಪಿಯ ನಿರೀಕ್ಷಣಾ ಜಾಮೀನು ರದ್ದುಗೊಂಡ ಬಳಿಕ ಕೇರಳದಲ್ಲಿ ಶಿಲ್ಪಿ ಕೃಷ್ಣನಾಯಕ್ ಬಂಧನವಾಗಿದೆ.
ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಪರಶುರಾಮನ ನಕಲಿ ಮೂರ್ತಿ ನಿರ್ಮಿಸಲಾಗಿದೆ ಎಂಬ ಆರೋಪ 2023 ರಾಜಕೀಯ ವಾಗಿ ಸಂಚಲನ ಮೂಡಿಸಿತು. ಮೊದಲು ಗೋಮಾಳ ಜಾಗದಲ್ಲಿ ಪಾರ್ಕ್ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಬಳಿಕ ಪರಶುರಾಮನ ಮೂರ್ತಿ ನಕಲಿ ಎನ್ನುವುದನ್ನು ಸಾಬೀತು ಮಾಡುವ ನಿಟ್ಟಿನಲ್ಲಿ ಹೋರಾಟ ಮುಂದುವರಿಸಿತ್ತು. ಸದ್ಯ ಪ್ರಕರಣ ಸಿ ಓ ಡಿ ತನಿಖೆಯಲ್ಲಿದ್ದು, ಇದರ ಜೊತೆಗೆ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ವಿಚಾರಣ ಆಯೋಗ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ.
ಇದೀಗ ಶಿಲ್ಪಿ ಕೃಷನಾಯ್ಕ್ ಬಂಧನ ವಿಚಾರ ಕಾಂಗ್ರೆಸ್‌ಗೆ ಅಸ್ತ್ರವಾಗಿ ಸಿಕ್ಕಿದೆ. ಕೇವಲ ಶಿಲ್ಪಿ ಬಂಧನವಾದರೆ ಸಾಲದು, ಪರಶುರಾಮ ಥೀಮ್ ಪಾರ್ಕ್ ಹಿಂದಿನ ರೂವಾರಿ ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ವಿರುದ್ಧ ಕ್ರಮವಾಗಲಿ ಎಂದು ಆಗ್ರಹಿಸಿದ್ದಾರೆ.
PublicNext
12/11/2024 05:39 pm