ಮುಲ್ಕಿ: ಪಕ್ಷಿಕೆರೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಕಾರ್ತಿಕ್ ಪತ್ನಿಯ ತಾಯಿ ನೀಡಿದ ದೂರಿನಂತೆ ಹಾಗೂ ಡೆತ್ ನೋಟಿನ ಅನ್ವಯ ಮೃತ ಕಾರ್ತಿಕ್ ತಾಯಿ ಶ್ಯಾಮಲಾ ಭಟ್ ಹಾಗೂ ಸಹೋದರಿ ಕಣ್ಮಣಿ ರಾವ್ ಮೇಲೆ ಪ್ರಕರಣ ದಾಖಲಾಗಿದೆ.
ಮುಲ್ಕಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪಕ್ಷಿಕೆರೆಯಲ್ಲಿ ನಡೆದ ಕೊಲೆ ಮತ್ತು ಆತ್ಮಹತ್ಯೆಗೆ ಸಂಬಂಧಿಸಿದಂತೆ ಮೃತ ಕಾರ್ತಿಕ್ ಭಟ್‌ನ ಕರಾಳ ಮುಖಗಳು ಬಯಲಾಗುತ್ತಿದ್ದು, ಹಲವರಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಮಾಹಿತಿ ಬಂದಿದೆ. ಪ್ರಕರಣವೊಂದರಲ್ಲಿ ಕಾರ್ತಿಕ್ ಭಟ್ ಸುರತ್ಕಲ್‌ನ ಸೊಸೈಟಿಯೊಂದರಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸಂದರ್ಭ ಪಕ್ಷಿಕೆರೆ ಹೊಸ ಕಾಡು ನಿವಾಸಿ ಮಹಮ್ಮದ್ ಯಾನೆ ಅಹಮದ್ ಎಂಬುವರಿಗೆ ವಂಚಿಸಿದ ಆರೋಪ ಕೇಳಿ ಬಂದಿದೆ.
ವಂಚನೆಗೊಳಗಾದ ಮೊಹಮ್ಮದ್ ಅವರು ಪಕ್ಷಿಕೆರೆ ಹೊಸ ಕಾಡು ಬಳಿ ಟೈಲರ್ ವೃತ್ತಿ ನಡೆಸುತ್ತಿದ್ದು, ಎರಡು ವರ್ಷದ ಹಿಂದೆ ಪಕ್ಷಿಕೆರೆ ಬ್ಯಾಂಕ್‌ವೊಂದರಲ್ಲಿ ತನ್ನ 10 ಪವನ್ ಚಿನ್ನವನ್ನು ಅಡವಿಟ್ಟು 1 ಲಕ್ಷ 60 ಸಾವಿರ ಸಾಲ ಪಡೆದಿದ್ದರು. ಈ ಸಂದರ್ಭ ಮೊಹಮ್ಮದ್ ಅವರಿಗೆ ಕಾರ್ತಿಕ್ ಭಟ್ ಅವರು ಪರಿಚಯವಾಗಿದ್ದು, ಕಾರ್ತಿಕ್ ಭಟ್ ಅವರನ್ನು ಪುಸಲಾಯಿಸಿ ತಾನು ಮ್ಯಾನೇಜರ್ ಆಗಿರುವ ಸುರತ್ಕಕ್‌ನ ಸುಬ್ರಮಣ್ಯ ಸಹಕಾರಿ ಸಂಘದಲ್ಲಿ ಅಡವಿಟ್ಟರೆ ಹೆಚ್ಚಿನ ಸಾಲ ನೀಡುವುದಾಗಿ ಭರವಸೆ ನೀಡಿದ್ದ. ಅದರಂತೆ ಪಕ್ಷಿಕೆರೆ ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನವನ್ನು ಬಿಡಿಸಿ, ಕಾರ್ತಿಕ್ ತಮ್ಮ ಸೊಸೈಟಿಯಲ್ಲಿ ಇರಿಸಿ 3 ಲಕ್ಷ 4 ಸಾವಿರ ಸಾಲ ಪಡೆದಿದ್ದರು.
ಬಳಿಕ ವೈಯುಕ್ತಿಕ ಸಮಸ್ಯೆಯಿಂದ ಮೊಹಮ್ಮದ್ ಅವರಿಗೆ ತಾವು ಸಾಲ ತೆಗೆದುಕೊಂಡ ಸುರತ್ಕಲ್ ಸೊಸೈಟಿಗೆ ಭೇಟಿ ನೀಡಲು ಆಗಿಲ್ಲ. ಆದರೆ ಕಳೆದ ಕೆಲವು ದಿನಗಳ ಹಿಂದೆ ಕಾರ್ತಿಕ್ ಆತ್ಮಹತ್ಯೆ ಸುದ್ದಿ ತಿಳಿದುಬಂದು ಸಂಶಯಗೊಂಡ ಮೊಹಮ್ಮದ್ ಕೂಡಲೇ ಸುರತ್ಕಲ್‌ನ ಸೊಸೈಟಿ ಸಿಬ್ಬಂದಿಯನ್ನು ಸಂಪರ್ಕಿಸಿದಾಗ "ನೀವು ಅಡವಿಟ್ಟ ಚಿನ್ನವನ್ನು 4 ತಿಂಗಳಲ್ಲೇ ಬಿಡಿಸಿಕೊಂಡ ಬಗ್ಗೆ ಸೊಸೈಟಿ ಸಿಬ್ಬಂದಿ ಹೇಳಿದ್ದಾರೆ. ಇದನ್ನು ಕೇಳಿದ ಮೊಹಮ್ಮದ್ ಆತಂಕಗೊಂಡಿದ್ದು, ಕಾರ್ತಿಕ್ ಭಟ್ ಈ ಚಿನ್ನವನ್ನು ಫೋರ್ಜರಿ ಮಾಡಿ ಅದರ ಮೂಲ ಬೆಲೆಗೆ ಮಾರಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಅವರು ಮಂಗಳೂರು ಪೊಲೀಸ್ ಕಮಿಷನರಿಗೆ ದೂರು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಕಾರ್ತಿಕ್ ಭಟ್‌ನ ಒಂದೊಂದು ಪ್ರಕರಣಗಳು ಬಯಲಿಗೆ ಬರುತ್ತಿದ್ದು ಪ್ರಕರಣ ರೋಚಕ ತೀರುವಿನತ್ತ ಸಾಗುತ್ತಿದೆ.
PublicNext
13/11/2024 07:53 am