ಚನ್ನಪಟ್ಟಣ : ಚನ್ನಪಟ್ಟಣ ಬೈ ಎಲೆಕ್ಷನ್ನಲ್ಲಿ ಅಬ್ಬರದ ಪ್ರಚಾರ ಮುಂದುವರೆದಿದೆ. ಎನ್ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಇಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಅಂಬಾಡಹಳ್ಳಿ ಮತ್ತು ಸೋಗಾಲ ಗ್ರಾಮಗಳಲ್ಲಿ ಹೆಚ್ ಡಿಕೆ ಮತ್ತು ಬಿಎಸ್ ವೈ ಜಂಟಿ ಪ್ರಚಾರ ನಡೆಸಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆ ನಡೆಸಿದರು. ರಾಜ್ಯ ಸರ್ಕಾರ ನಡೆಯ ವಿರುದ್ಧ ಇಬ್ಬರು ನಾಯಕರು ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ ಹಿಂದೆ ನಾನು ಮತ್ತು ಕುಮಾರಸ್ವಾಮಿ ಅವರು ಸೇರಿ ಸರ್ಕಾರ ಮಾಡಿ ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಹೆಣ್ಣುಮಕ್ಕಳ ಕಲ್ಯಾಣಕ್ಕೆ ಉತ್ತಮ ಕಾರ್ಯಕ್ರಮ ಜಾರಿಗೆ ತಂದಿದ್ದೆವು.
ನಿಮ್ಮ ಮನೆಯಲ್ಲಿ ಹುಟ್ಟುವ ಹೆಣ್ಣು ಮಗಳು ಹದಿನೆಂಟು ವರ್ಷ ವಯಸ್ಸಿಗೆ ಬರುವ ಹೊತ್ತಿಗೆ ಹತ್ತಾರು ಲಕ್ಷ ರೂಪಾಯಿ ಹಣ ಸಿಗುತ್ತಿತ್ತು. ಆ ಮಕ್ಕಳು ಗೌರವ, ಸ್ವಾಭಿಮಾನದಿಂದ ಬಾಳಿ ಬದುಕುವಂತಹ ಕಾರ್ಯಕ್ರಮ ಮಾಡಿದ್ದೆವು ಎಂದರು.
ಶಾಲೆಗೆ ತೆರಳುವ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾನು ಕುಮಾರಸ್ವಾಮಿ ಸೇರಿ ಉಚಿತ ಬೈಸಿಕಲ್ ಯೋಜನೆ ಜಾರಿ ಮಾಡಿದ್ದೆವು. ಅದು ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ.
ಇದನ್ನೆಲ್ಲ ಜನತೆ ಮರೆಯಬಾರದು ಎಂದು ಬಿಎಸ್ ವೈ ಅವರು ಮನವಿ ಮಾಡಿದರು. ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ನಾವಿಬ್ಬರೂ ಜಾರಿ ಮಾಡಿದ್ದೆವು. ನಿಮ್ಮೆಲ್ಲರ ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿಮೀರಿ ಕೆಲಸ ಮಾಡಿದ್ದೇವೆ ಎಂದು ಹೇಳಿದರು.
PublicNext
06/11/2024 06:12 pm