ಫ್ಲೋರಿಡಾ: ‘ಮಹದುದ್ದೇಶಕ್ಕಾಗಿಯೇ ದೇವರು ನನ್ನನ್ನು ಬದುಕುಳಿಸಿದ್ದಾರೆ. ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭಕ್ಕಾಗಿ ಈ ಬಹುಮತ ಲಭಿಸಿದೆ’ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸಮೀಪ ತಲುಪಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.
ಫ್ಲೊರಿಡಾದ ವೆಸ್ಟ್ ಪಾಮ್ ಬೀಚ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ‘ಅಭೂತಪೂರ್ವ ಹಾಗೂ ಸಂಪೂರ್ಣ ಬೆಂಬಲವನ್ನು ಅಮೆರಿಕ ನೀಡಿದೆ’ ಎಂದಿದ್ದಾರೆ.
ಅಮೆರಿಕವನ್ನು ಮತ್ತೊಮ್ಮೆ ಅದ್ಭುತ ರಾಷ್ಟ್ರವನ್ನಾಗಿಸಲು ಈ ಗೆಲುವು ಸಹಕಾರಿಯಾಗಿದೆ. ನನ್ನನ್ನು ದೇವರು ಬದುಕುಳಿಸಿದ್ದು ಈ ದೇಶವನ್ನು ರಕ್ಷಿಸಲು ಹಾಗೂ ಅಮೆರಿಕದ ಹಿರಿಮೆಯನ್ನು ಕಾಪಾಡುವ ಸಲುವಾಗಿ’ ಎಂದು ಹೇಳಿದ ಟ್ರಂಪ್, ತಮ್ಮ ಮೇಲೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಡೆದ ಎರಡು ಗುಂಡಿನ ದಾಳಿಯನ್ನು ಪರೋಕ್ಷವಾಗಿ ನೆನಪಿಸಿಕೊಂಡರು.
‘ನೀವು, ನಿಮ್ಮ ಕುಟುಂಬ ಹಾಗೂ ನಿಮ್ಮ ಭವಿಷ್ಯದ ಪ್ರತಿಯೊಂದು ದಿನವೂ ಸುರಕ್ಷಿತವಾಗಿಡಲು ನಾನು ಹೋರಾಡುತ್ತೇನೆ. ಅಮೆರಿಕದ ಮಕ್ಕಳು ಹಾಗೂ ಪ್ರತಿಯೊಬ್ಬರೂ ಅದ್ಭುತ ಜೀವನ ನಡೆಸಲು ಅಗತ್ಯವಿರುವುದನ್ನು ಸ್ಥಾಪಿಸದ ಹೊರತೂ ನಾನು ವಿರಮಿಸುವುದಿಲ್ಲ’ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.
PublicNext
06/11/2024 04:07 pm