ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫ್ಲೈ ಓವರ್ ಕಾಮಗಾರಿ ಪುನಾರಂಭಕ್ಕೆ ಸಿದ್ಧತೆ- ಸುರಕ್ಷತಾ ಕ್ರಮ ಬಗ್ಗೆ ಜಿಲ್ಲಾಡಳಿತ ಖಡಕ್ ಸೂಚನೆ

ಹುಬ್ಬಳ್ಳಿ: ಎಎಸ್ಐ ಸಾವಿನ ಪ್ರಕರಣ ಬೆನ್ನಲ್ಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಹುಬ್ಬಳ್ಳಿಯ ಮೇಲ್ಸೇತುವೆ ಕಾಮಗಾರಿ ಪುನಾರಂಭಿಸಲು ಝಂಡು ಕಂಪೆನಿಯು ಸಿದ್ಧತೆ ನಡೆಸಿದ್ದು, ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಸೂಕ್ತ ಸುರಕ್ಷತಾ ವರದಿಯನ್ನು ಸಲ್ಲಿಸಬೇಕಿದೆ. ಕಾಮಗಾರಿ ಪುನಾರಂಭವಾದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗುತ್ತಿಗೆದಾರ ಕಂಪೆನಿಗೆ ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ.

ಜಿಲ್ಲಾಡಳಿತಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಸುರಕ್ಷತಾ ವರದಿಯನ್ನು ಸಲ್ಲಿಸಿದ ಬಳಿಕವೇ ಜಿಲ್ಲಾಡಳಿತದ ಸೂಚನೆ ಮೇರೆಗೆ ಝಂಡು ಕಂಪೆನಿಯು ಕಾಮಗಾರಿ ಆರಂಭ ಮಾಡಬೇಕಿದೆ. ಹೌದು...ಈಗಾಗಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಕಾಲಾವಕಾಶ ಕೇಳಿರುವ ಗುತ್ತಿಗೆದಾರ ಕಂಪೆನಿ, ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಾಮಗಾರಿ ಆರಂಭದ ಬಗ್ಗೆಯೂ ಪೊಲೀಸ್ ಇಲಾಖೆಯ ಜೊತೆಗೆ ಮಾತುಕತೆ ನಡೆಸಬೇಕಿದೆ. ತಾನು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಬೇಕಿದೆ. ಇದಾದ ನಂತರ ಕಾಮಗಾರಿ ವೇಗ ಪಡೆಯಲಿದೆ.

ಹಳೇ ಕೋರ್ಟ್ ವೃತ್ತದ ಬಳಿ ಸೆ.10ರಂದು ಕರ್ತವ್ಯಕ್ಕೆ ತೆರಳುತ್ತಿದ್ದ ಹುಬ್ಬಳ್ಳಿ ಉಪನಗರ ಠಾಣೆ ಎಎಸ್‌ಐ ನಾಭಿರಾಜ ದಯಣ್ಣವರ ತಲೆ ಮೇಲೆ ಮೇಲ್ಸೇತುವೆಯ ಕಬ್ಬಿಣದ ರಾಡ್ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸೆ. 15ರಂದು ಮೃತಪಟ್ಟಿದ್ದರು. ಈ ಘಟನೆಯಿಂದ ಎಚ್ಚೆತ್ತ ಜಿಲ್ಲಾಡಳಿತವು, ಮುಂದಾಗಬಹುದಾದ ಅಪಾಯದ ಸ್ಥಳಗಳನ್ನು ಗುರುತಿಸಬೇಕು.

ಸುರಕ್ಷತಾ ಕ್ರಮ ಕೈಗೊಳ್ಳುವವರೆಗೆ ತಾತ್ಕಾಲಿಕವಾಗಿ ಮೇಲ್ಸೇತುವೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು. ಈ ನಿಟ್ಟಿನಲ್ಲಿ ಈಗ ಕಾಮಗಾರಿ ಆರಂಭಕ್ಕೆ ಸುರಕ್ಷತಾ ವರದಿಯನ್ನು ಕೇಳಿದ್ದು, ಪೊಲೀಸ್ ಇಲಾಖೆಯ ಜೊತೆಗೆ ಮಾತುಕತೆ ನಡೆಸಿ ಹಾಗೂ ವರದಿಯನ್ನು ಸಲ್ಲಿಸಿದ ಬಳಿಕ ಆರಂಭ ಮಾಡುವಂತೆ ಸೂಚನೆ ನೀಡಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಸಂಭವನೀಯ ಅಪಾಯಕಾರಿ ಸ್ಥಳ ಪರಿಶೀಲಿಸಿ, ಕೈಗೊಂಡ ಮುಂಜಾಗ್ರತಾ ಕ್ರಮಗಳ ವರದಿ ಸಲ್ಲಿಸುವಂತೆ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಗೆ ನಿರ್ದೇಶಿಸಿತ್ತು. ಇದಾದ ಬಳಿಕ ವರದಿ ಸಲ್ಲಿಕೆಗೆ ಕಾಲಾವಕಾಶ ಕೇಳಿದ್ದು, ವರದಿಯನ್ನು ಪರಿಶೀಲಿಸಿ ಬಳಿಕ ಜಿಲ್ಲಾಡಳಿತವು ಕಾಮಗಾರಿ ಆರಂಭಕ್ಕೆ ಸೂಚನೆ ನೀಡಲಿದೆ.

ಇದಕ್ಕೂ ಮೊದಲು ಪೊಲೀಸ್ ಇಲಾಖೆಯೊಂದಿಗೆ ಮಾತುಕತೆ ನಡೆಸಬೇಕು. ಅವರು ಎಲ್ಲಾ ರೀತಿಯ ಸುರಕ್ಷತಾ ಕ್ರಮ ಕೈಗೊಂಡಿದೆ ಎಂದು ಒಪ್ಪಿಕೊಂಡ ಬಳಿಕ ಕಾಮಗಾರಿ ಆರಂಭಿಸಬೇಕು ಎಂದಿದೆ. ಇದೆಲ್ಲದಕ್ಕೂ ಒಪ್ಪಿರುವ ಗುತ್ತಿಗೆದಾರ ಝಂಡು ಕಂಪೆನಿಯು, ಕಾರ್ಮಿಕರನ್ನು ಒಗ್ಗೂಡಿಸುವ ಪ್ರಕ್ರಿಯೆ ನಡೆಸಲಾಗುವುದು ಹಾಗೂ ಮತ್ತೊಂದು ಹಂತದ ಸುರಕ್ಷತಾ ಕ್ರಮ ಜರುಗಿಸುವ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

Edited By : Suman K
Kshetra Samachara

Kshetra Samachara

18/10/2024 07:08 pm

Cinque Terre

9.95 K

Cinque Terre

0

ಸಂಬಂಧಿತ ಸುದ್ದಿ