ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಂಗಾಂಗ ದಾನದ ಮೂಲಕ ಇತರರಿಗೆ ಜೀವದಾನಿಯಾದ ಕುಟುಂಬ

ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ವ್ಯಕ್ತಿಯೊಬ್ಬರ ಕಣ್ಣು, ಹೃದಯ, ಕಿಡ್ನಿ, ಲಿವರ್ ದಾನ ಮಾಡುವ ಮೂಲಕ ಮೃತನ ಕುಟುಂಬಸ್ಥರು ಇತರರ ಜೀವನಕ್ಕೆ ಜೀವದಾನಿಗಳಾಗಿ ಮಾನವೀಯತೆ ಮೆರೆದಿದ್ದಾರೆ.

ಹೌದು ಮಾಗಡಿ ರಸ್ತೆಯ ಕೆ.ಪಿ ಅಗ್ರಹಾರದ ನಿವಾಸಿ ಕುಮರೇಶ್ (57) ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ತೀವ್ರ ಗಾಯಗೊಂಡ ಕುಮರೇಶ್ ಅವರನ್ನು ಕುಟುಂಬಸ್ಥರು ಟಿ.ದಾಸರಹಳ್ಳಿ ಸಮೀಪದ ಪ್ರಕ್ರಿಯ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಮೆದುಳು ನಿಷ್ಕ್ರಿಯವಾಗಿರುವುದನ್ನ ಕುಟುಂಬದವರಿಗೆ ತಿಳಿಸಿದರು. ಅಲ್ಲದೇ ಉಳಿದ ಅಂಗಾಂಗಗಳನ್ನು ದಾನ ಮಾಡಿದರೆ ಇತರರಿಗೆ ಜೀವದಾನ ಮಾಡಬಹುದು ಎಂದು ಕುಟುಂಬದವರಿಗೆ ವೈದ್ಯರು ಮನವರಿಕೆ ಮಾಡಿದರು.

ಮೃತನ ಉಪಯುಕ್ತ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಒಪ್ಪಿದ ಮೇರೆಗೆ ತಕ್ಷಣ ಪ್ರಕ್ರಿಯ ಆಸ್ಪತ್ರೆ ವೈದ್ಯರು ಮೃತನ ಅಂಗಾಂಗಗಳನ್ನು ಬೇರ್ಪಡಿಸಿ ನಾರಾಯಣ ಹೃದಯಾಲಯಕ್ಕೆ ಹೃದಯ ಹಾಗೂ ಮಲ್ಲೇಶ್ವರಂನ ಅಪೋಲೊ ಆಸ್ಪತ್ರೆಗೆ ಇತರೆ ಅಂಗಾಂಗಗಳನ್ನು ರವಾನಿಸಿದರು.

ಇನ್ನೂ ಮೃತ ಕುಮರೇಶ್ ಪತ್ನಿ ಸೆಲ್ವಿ ಮಾತನಾಡಿ, ಎಷ್ಟೇ ಪ್ರಯತ್ನಿಸಿದರೂ ತಮ್ಮ ಪತಿ‌ಯಂತೂ ಬದುಕುಳಿಯುವುದಿಲ್ಲ, ಆದ್ರೆ ಅಂಗಾಂಗಗಳ ದಾನ ಮಾಡಿದರೆ ಇತರರ ಜೀವ ಉಳಿಯುತ್ತವೆ, ಇದೊಂದು ಪುಣ್ಯ ಕಾರ್ಯ ಎಂದರು. ಮೃತ ಕುಮರೇಶ್ ಕುಟುಂಬ ಇತರರ ಜೀವಕ್ಕೆ ಜೀವದಾನಿಗಳಾಗಿದ್ದಾರೆಂದು ಆಸ್ಪತ್ರೆ ಆಡಳಿತ ಮಂಡಳಿ ಶ್ಲಾಘನೆ ವ್ಯಕ್ತ ಪಡಿಸಿದರು.

Edited By : Manjunath H D
PublicNext

PublicNext

16/10/2024 07:49 pm

Cinque Terre

29.99 K

Cinque Terre

0