ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಗ್ರಾಮ ಆಡಳಿತಾಧಿಕಾರಿಗಳು ಗುರುವಾರದಿಂದ ಪ್ರತಿಭಟನೆಗೆ ಇಳಿಯಲಿದ್ದಾರೆ. ಗುರುವಾರ ರಾಜ್ಯದ ಎಲ್ಲ ತಹಶೀಲ್ದಾರ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಿರುವ ಗ್ರಾಮ ಆಡಳಿತಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ. ಬೇಡಿಕೆ ಈಡೇರಿಸಿದರೆ ಕರ್ತವ್ಯ, ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಎಂದು ಹಾವೇರಿ ಗ್ರಾಮ ಆಡಳಿತಾಧಿಕಾರಿ ಸಂಘದ ಜಿಲ್ಲಾಧ್ಯಕ್ಷ ರುದ್ರೇಶ್ ಎಚ್ಚರಿಕೆ ನೀಡಿದ್ದಾರೆ.
ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಸುಮಾರು 18ಕ್ಕೂ ಅಧಿಕ ಮೊಬೈಲ್/ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. 4 ತಂತ್ರಾಂಶಗಳ ನಿರ್ವಹಣೆಗೆ ಹಲವಾರು ತೊಂದರೆಗಳಾಗುತ್ತಿವೆ. ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಷನ್ ಗಳ ಮೂಲಕ ಕೆಲಸ ಹತ್ತಾರು ಸಮಸ್ಯೆ ಸೃಷ್ಟಿಸಿದೆ. ಆದರೆ, ಇದಕ್ಕೆ ಅಗತ್ಯವಿರುವ ಪರಿಕರ ಮತ್ತು ಇಂಟರ್ ನೆಟ್ ಸೌಲಭ್ಯ ಒದಗಿಸಿಲ್ಲ ಎಂದು ರುದ್ರೇಶ್ ಆರೋಪಿಸಿದರು.
ಕೆಲಸದ ಒತ್ತಡದಿಂದ ಜಿಲ್ಲೆಯಲ್ಲಿ ಒಬ್ಬರು ಹಾಗೂ ರಾಜ್ಯಾದ್ಯಂತ 50ಕ್ಕೂ ಅಧಿಕ ವಿಎಗಳು ವಿವಿಧ ಆರೋಗ್ಯ ಸಮಸ್ಯೆ ಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ರುದ್ರೇಶ್ ದೂರಿದರು. ಎಲ್ಲಾ ಮೊಬೈಲ್ ಆಪ್ ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಧಿಸಲು ತೀವ್ರ ಒತ್ತಡ ಹೇರುತ್ತಿದ್ದಾರೆ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿವೆ. ಇದರಿಂದ ಬೇಸತ್ತು ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ರುದ್ರೇಶ್ ತಿಳಿಸಿದರು.
PublicNext
25/09/2024 10:39 pm