ಹಾವೇರಿ: ಹಾವೇರಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಇದೀಗ ವಿನೂತನ ಕೆಫೆಯೊಂದು ನಿರ್ಮಾಣಗೊಳ್ಳುತ್ತಿದೆ. ಅಕ್ಕ ಕೆಫೆ ಹೆಸರಿನ ಈ ಕ್ಯಾಂಟೀನ್ ವಿಶೇಷತೆ ಎಂದರೆ ಈ ಕೆಫೆ ನಿರ್ವಹಣೆ ಮಾಡುವವರು ಲಿಂಗತ್ವ ಅಲ್ಪಸಂಖ್ಯಾತರು. ಹೌದು, ಈ ಅಕ್ಕ ಕೆಫೆಯಲ್ಲಿ ಅಡುಗೆ ಮಾಡುವುದು, ಪೂರೈಕೆ ಮಾಡುವುದು, ಹಣದ ಕೌಂಟರ್ ನಿರ್ವಹಣೆ ಮಾಡುವವರೆಲ್ಲ ಲಿಂಗತ್ವ ಅಲ್ಪಸಂಖ್ಯಾತರು.
ರಾಜ್ಯ ಸರ್ಕಾರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಹಿಳಾ ಸಬಲೀಕರಣಕ್ಕಾಗಿ ಸುಮಾರು 50 ಅಕ್ಕ ಕೆಫೆ ನಿರ್ಮಿಸುತ್ತಿದೆ. ಬೆಂಗಳೂರಲ್ಲಿ ಈಗಾಗಲೇ ಅಕ್ಕ ಕೆಫೆ ಕಾರ್ಯಾರಂಭ ಮಾಡಿದ್ದು, ಅದರ ನಿರ್ವಹಣೆಯನ್ನು ಮಹಿಳೆಯರೇ ಮಾಡುತ್ತಿದ್ದಾರೆ. ರಾಜ್ಯದ ವಿವಿಧೆಡೆಯಲ್ಲಿ ನಿರ್ಮಾಣವಾಗಿರುವ ಅಕ್ಕ ಕೆಫೆಗಳನ್ನು ಸಹ ಮಹಿಳೆಯರೇ ನಿರ್ವಹಣೆ ಮಾಡಲಿದ್ದಾರೆ. ಆದರೆ, ಹಾವೇರಿಯಲ್ಲಿ ಜಿಲ್ಲಾಡಳಿತದ ಬಳಿ ಇರುವ ಅಕ್ಕ ಕೆಫೆಯನ್ನು ಮಾತ್ರ ಲಿಂಗತ್ವ ಅಲ್ಪಸಂಖ್ಯಾತರು ನಿರ್ವಹಣೆ ಮಾಡಲಿದ್ದಾರೆ.
ಈ ರೀತಿ ವಿಶಿಷ್ಟ ಅಕ್ಕ ಕೆಫೆ ನಿರ್ಮಾಣಕ್ಕೆ ಹಾವೇರಿಯ ಲಿಂಗತ್ವ ಅಲ್ಪಸಂಖ್ಯಾತರ ಉತ್ಸಾಹ ಮತ್ತು ಸರ್ಕಾರದ ಸಹಕಾರ ಕಾರಣ ಎನ್ನುತ್ತಾರೆ ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ಅಕ್ಷಯ ಶ್ರೀಧರ್. ಜಿಲ್ಲಾ ಪಂಚಾಯತ್ ಮತ್ತು ಸರ್ಕಾರದ ಈ ನಿರ್ಧಾರಕ್ಕೆ ಲಿಂಗತ್ವ ಅಲ್ಪಸಂಖ್ಯಾತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರು ಅಂದರೆ ಕೇವಲ ಭಿಕ್ಷಾಟನೆ ಮತ್ತು ವೇಶ್ಯಾವಾಟಿಕೆಯಿಂದ ಬದುಕು ಕಟ್ಟಿಕೊಳ್ಳುವಂತವರು ಎನ್ನುವ ವಾತಾವರಣವಿದೆ. ಇಂತಹ ಈ ಸಂದರ್ಭದಲ್ಲಿ ಸರ್ಕಾರ ತಮಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
PublicNext
16/12/2024 12:12 pm