ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಪಾದೂರು ಜಲ್ಲಿ ಕ್ರಷರ್ ನಿರ್ಮಾಣದ ಜಂಟಿ ಸರ್ವೇಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ತಡೆ

ಕಾಪು: ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಐಎಸ್‌ಪಿಆರ್‌ಎಲ್ ಯೋಜನಾ ಪ್ರದೇಶದೊಳಗೆ ನಿರ್ಮಿಸಲು ಉದ್ದೇಶಿಸಿರುವ ಪಾದೂರು ಜಲ್ಲಿ ಕ್ರಷರ್‌ಗೆ ಜಮೀನು ನೀಡುವ ಬಗ್ಗೆ ಜಂಟಿ ಸರ್ವೇಗೆ ಆಗಮಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳೀಯರು ಬುಧವಾರ ಹಿಮ್ಮೆಟ್ಟಿಸಿದ್ದಾರೆ.

ಐಎಸ್‌ಪಿಆರ್‌ಎಲ್ ಯೋಜನಾ ಪ್ರದೇಶದೊಳಗೆ ಸಂಗ್ರಹಗೊಂಡಿರುವ ಬಂಡೆ ಕಲ್ಲುಗಳನ್ನು ತೆರವುಗೊಳಿಸುವುದಕ್ಕಾಗಿ ಯೋಜನಾ ಪ್ರದೇಶದೊಳಗೆ ಜಲ್ಲಿ ಕ್ರಷರ್ ನಿರ್ಮಾಣ ಮಾಡುವ ಬಗ್ಗೆ ಮಜೂರು ಗ್ರಾಪಂಗೆ ಮಾಹಿತಿ ಸಿಕ್ಕಿತ್ತು. ಇದನ್ನು ವಿರೋಧಿಸಿ ಮಜೂರು ಗ್ರಾಪಂ ಗ್ರಾಮಸ್ಥರನ್ನು ಸೇರಿಸಿಕೊಂಡು ಜನಾಭಿಪ್ರಾಯ ಸಭೆ ನಡೆಸಿದ್ದು ಅಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಜಲ್ಲಿ ಕ್ರಷರ್ ಸ್ಥಾಪನೆಗೆ ವಿರೋಧ ವ್ಯಕ್ತ ಪಡಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ವಿಚಾರವನ್ನು ಸಭೆಗೆ ಆಗಮಿಸಿದ್ದ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅಶ್ವಿನಿ ಅವರಿಗೂ ಮನವರಿಕೆ ಮಾಡಿಕೊಡಲಾಗಿತ್ತು.

ಈ ನಡುವೆಯೇ ಬುಧವಾರ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅಶ್ವಿನಿ ನೇತೃತ್ವದ ಅಧಿಕಾರಿಗಳ ತಂಡ ಏಕಾಏಕಿಯಾಗಿ ಐಎಸ್‌ಪಿಆರ್‌ಎಲ್ ಪರಿಸರದಲ್ಲಿ ಜಂಟಿ ಸರ್ವೇಗಾಗಿ ಬಂದಿದ್ದು, ಇದನ್ನು ತಿಳಿಯುತ್ತಿದ್ದಂತೆಯೇ ಸ್ಥಳೀಯರು ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದರು.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಗ್ರಾ.ಪಂ. ಸದಸ್ಯರು, ಜನಜಾಗೃತಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಸೇರಿದಂತೆ ಸ್ಥಳೀಯರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡಕ್ಕೆ ವಿರೋಧ ವ್ಯಕ್ತ ಪಡಿಸಿ, ಗ್ರಾ.ಪಂ. ಮಂಡಿಸಿದ್ದ ನಿರ್ಣಯದ ಪ್ರತಿಯನ್ನು ಅಧಿಕಾರಿಗಳಿಗೆ ನೀಡಿದರು.

ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಜಂಟಿ ಸರ್ವೇಗಾಗಿ ಬಂದಿದ್ದು, ಜನರ ವಿರೋಧದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜನರ ಒತ್ತಾಯಕ್ಕೆ ಮಣಿದು ಬರಿಗೈಯಲ್ಲಿಯೇ ಹಿಂದಿರುಗಿದ್ದಾರೆ.

Edited By : Ashok M
PublicNext

PublicNext

19/09/2024 09:57 am

Cinque Terre

21.69 K

Cinque Terre

0

ಸಂಬಂಧಿತ ಸುದ್ದಿ