ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ದೈಹಿಕ ಶಿಕ್ಷಕರ ಬೀಳ್ಕೊಡುಗೆಗೆ ಕಣ್ಣೀರ ಧಾರೆ!- ಶಿಕ್ಷಣ ಸಂಬಂಧಗಳ ಮಹತ್ವ ಸಾರಿದ ಆಲೂರು ಸರ್ಕಾರಿ ಪ್ರೌಢಶಾಲೆ

ಕುಂದಾಪುರ: ಹಿಂದಿನ ಕಾಲದಲ್ಲಿ ಶಿಕ್ಷಕರ ಮೇಲಿದ್ದ ಗೌರವ ಈಗಲೂ ಉಳಿದುಕೊಂಡಿದೆಯೇ ಎನ್ನುವ ಜಿಜ್ಞಾಸೆಯ ಶಿಕ್ಷಣ ವ್ಯವಸ್ಥೆಯೊಳಗೆ ದೈಹಿಕ ಶಿಕ್ಷಕರೊಬ್ಬರು ವರ್ಗಾವಣೆಯಾಗಿ ಬೇರೆ ಶಾಲೆಗೆ ಹೋಗುತ್ತಾರೆಂದಾಗ ಆ ಶಾಲೆಯ ವಿದ್ಯಾರ್ಥಿಗಳಷ್ಟೇ ಅಲ್ಲ ಶಿಕ್ಷಕರೂ ಕಣ್ಣೀರು ಸುರಿಸಿ ಬೀಳ್ಕೊಟ್ಟ ಅಪರೂಪದ ಘಟನೆ ಬೈಂದೂರು ತಾಲೂಕಿನ ಆಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಅದೊಂದು ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿರುವ ಈ ಪ್ರೌಢಶಾಲೆಯಲ್ಲಿ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣಕ್ಕೆ ಆದ್ಯತೆ ಕೊಟ್ಟು ಗ್ರಾಮೀಣ ಪ್ರತಿಭೆಗಳನ್ನು ಅಂತರ್‌ ರಾಜ್ಯ ಮಟ್ಟಕ್ಕೆ ಕೊಂಡೊಯ್ದ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರಿಗೆ ಕಣ್ಣೀರ ಭಾವಪೂರ್ಣ ವರ್ಗಾವಣೆಗೆ ಸಾಕ್ಷಿಯಾದ ಘಟನೆಯಿದು.

ಹರ್ಕೂರು ನಿವಾಸಿ ಪ್ರವೀಣ್ ಕುಮಾರ್ ಶೆಟ್ಟಿ ಎಂಬ ದೈಹಿಕ ಶಿಕ್ಷಣ ಶಿಕ್ಷಕರು ಆಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಒಂದು ದಶಕದಿಂದ ಪಿ.ಟಿ. ಮೇಸ್ಟ್ರಾಗಿ ಕೆಲಸ ಮಾಡಿದ್ದರು. ಪ್ರತೀ ವರ್ಷವೂ ಅವರ ಶಾಲೆಯ ಮಕ್ಕಳು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ನೂರಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುವಲ್ಲಿ ಈ ಪ್ರವೀಣ್ ಮೇಸ್ಟ್ರ ಪ್ರಯತ್ನವನ್ನು ಇಡೀ ಊರೇ ಕೊಂಡಾಡುತ್ತಿತ್ತು.

ಅಷ್ಟೇ ಅಲ್ಲ, ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೂ ಈ ಮೇಸ್ಟ್ರೆಂದರೆ ಪಂಚ ಪ್ರಾಣ. ಆಟದ ಮೈದಾನದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ತಾರತಮ್ಯವಿಲ್ಲದೇ ಕೋಚಿಂಗ್ ಕೊಡುತ್ತಿದ್ದ ಈ ಮೇಸ್ಟ್ರು, ಮೊನ್ನೆ ಕುಂದಾಪುರ ತಾಲೂಕಿನ ಹೈಕಾಡಿ ಶಾಲೆಗೆ ಸರ್ಕಾರಿ ನಿಯಮಗಳಂತೆ ವರ್ಗಾವಣೆಗೊಂಡರು.

ನಿಯಮದಂತೆ ಶಾಲೆಯಲ್ಲಿ ಪಿ.ಟಿ. ಮಾಸ್ಟ್ರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಅಲ್ಲಿ ಕಂಡು ಬಂದ ದೃಶ್ಯ ಎಂತಹವರನ್ನೂ ಭಾವಬಂಧನದಲ್ಲಿ ಮುಳುಗಿಸದೇ ಇರಲು ಸಾಧ್ಯವೇ ಇರಲಿಲ್ಲ. ತನ್ನ ವಿದ್ಯಾರ್ಥಿಗಳು ಗುಂಪಾಗಿ ಪ್ರವೀಣ್ ಮೇಸ್ಟ್ರ ಕಾಲಿಗೆ ಬಿದ್ದು ಕಣ್ಣೀರು ಸುರಿಸಿದಾಗ ಮೈ ರೋಮಾಂಚನವಾಗದಿರದು. ಶಿಕ್ಷಕ- ಶಿಕ್ಷಕಿಯರೂ ಕಣ್ಣೀರಿನಲ್ಲಿ ಕರಗಿದ ಕ್ಷಣ ಮಾತ್ರ ಶಿಕ್ಷಕರ ವ್ಯಕ್ತಿತ್ವವನ್ನು ಉತ್ತುಂಗಕ್ಕೇರಿಸಿದ್ದು ಸುಳ್ಳಲ್ಲ. ಈ ಮಾದರಿ ಶಿಕ್ಷಕರು ಸಮಾಜಮುಖಿ ಚಿಂತನೆಯೊಂದಿಗೆ ಇದ್ದ ಶಾಲೆಗೆ ಗೌರವ ತಂದಿದ್ದಾರೆ. ಹೋದ ಶಾಲೆಯಲ್ಲಿಯೂ ಅದೇ ಪ್ರೀತಿ, ಗೌರವ ಸಂಪಾದಿಸಲಿ ಎನ್ನುವುದೇ ನಮ್ಮ ಆಶಯ.

-ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್, ಕುಂದಾಪುರ

Edited By : Nagesh Gaonkar
Kshetra Samachara

Kshetra Samachara

09/09/2024 08:44 pm

Cinque Terre

7.14 K

Cinque Terre

1

ಸಂಬಂಧಿತ ಸುದ್ದಿ