ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಿದಿರಿನಲ್ಲಿಯೇ ಸುಂದರ ಮನೆ - ಇದು ಕುಡ್ಲದ ವೈದ್ಯೆಯ ಕಲ್ಪನೆಯ ಕೂಸು

ಮಂಗಳೂರು: ಮನೆಯನ್ನು ವಿಶಿಷ್ಟ ರೀತಿಯಲ್ಲಿ ಕಟ್ಟಬೇಕೆಂಬ ಕಲ್ಪನೆ ಎಲ್ಲರಿಗೂ ಇರುತ್ತದೆ. ಮಂಗಳೂರಿನಲ್ಲೊಬ್ಬ ವೈದ್ಯೆ ಪರಿಸರಸ್ನೇಹಿ ಮನೆ ಬೇಕೆಂಬ ಕಲ್ಪನೆಯಲ್ಲಿ ಬಿದಿರನ್ನೇ ಬಳಸಿಕೊಂಡು ಮನೆಯೊಂದನ್ನು ನಿರ್ಮಿಸಿದ್ದಾರೆ.

ಸೆ.18ನ್ನು ವಿಶ್ವ ಬಿದಿರು ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದ ವಿಶೇಷ ಸುದ್ದಿಯಾಗಿ ಇದನ್ನು ನಿಮ್ಮ ಮುಂದಿಡುತ್ತಿದ್ದೇವೆ. ಮಂಗಳೂರಿನ ವೈದ್ಯೆ ಡಾ.ಮೀರಾ ಅವರ ಕಲ್ಪನೆಯ ಮೂಸೆಯಲ್ಲಿ ಸಿದ್ಧವಾಗಿರುವ ಮನೆಯಿದು.

800ಸ್ಕ್ವ್ಯಾರ್ ಫೀಟ್‌ನ ಈ ಮನೆ ತಳಪಾಯ, ಒಂದು ಬಾಗಿಲು, ಅಡುಗೆ ಮನೆಯ ಇಂಟೀರಿಯರ್ ಹೊರತುಪಡಿಸಿ ನೆಲಹಾಸು, ಮೇಲ್ಛಾವಣಿ, ಬಾಗಿಲುಗಳು, ಗೋಡೆ ಎಲ್ಲವೂ ಬಿದಿರಿನಿಂದಲೇ ನಿರ್ಮಾಣವಾದದ್ದು. ನಗರದ ಪಡೀಲ್ ಕಣ್ಣೂರಿನಲ್ಲಿ ಮನೆಯಲ್ಲಿ ಹಾಲ್, ಅಡುಗೆ ಕೋಣೆ, ಒಂದು ಬೆಡ್‌ರೂಂ ಮತ್ತು ವಾಷ್‌ರೂಂ ವ್ಯವಸ್ಥೆಯಿದೆ.

ಈ ಮನೆ 2016ರಲ್ಲಿ ಸಿಮೆಂಟ್, ಮರಳಿಲ್ಲದೆ ಪರಿಸರಸ್ನೇಹಿ ಕಲ್ಪನೆಯಲ್ಲಿ ನಿರ್ಮಾಣಗೊಂಡಿದೆ. ಕೇರಳದ ಸಂಸ್ಥೆ ಈ ಮನೆಯನ್ನು ನಿರ್ಮಿಸಿದೆ. ಮೊದಲಿಗೆ ಕಾಂಕ್ರೀಟ್ ಪೈಪ್ ಮೇಲೆ ತಳಪಾಯ ಹಾಕಿ ಅದರ ಮೇಲೆ ಸ್ಟ್ರಕ್ಚರ್ ಬ್ಯುಲ್ಡ್ ಮಾಡಲಾಗಿದೆ.

ಬಿದಿರಿನ ಫ್ಲೈವುಡ್ ಮಾದರಿಯ ಗೋಡೆ, ಬಿದಿರಿನದ್ದೇ ನೆಲಹಾಸು, ಮೇಲ್ಛಾವಣಿಗೆ ಮೊದಲು ಬಿದಿರಿನ ಸ್ಟ್ರಕ್ಚರ್ ನಿರ್ಮಿಸಿ ಬಳಿಕ ಉಪ್ಪಿನ ದ್ರಾವಣವನ್ನು ಸಿಂಪಡಿಸಿ ಗೆದ್ದಲು ಬಾರದಂತೆ ಆಂಡಲಿನ್ ಶೀಟ್ ಹಾಕಿರುವ ತೆಂಗಿನಗರಿಯನ್ನು ಮೇಲ್ಛಾವಣಿಯಂತೆ ಹಾಸಲಾಗಿದೆ. ವಿಶೇಷವೆಂದರೆ ಕೇವಲ ಎರಡೇ ಮಂದಿ ಕಾರ್ಮಿಕರಿಂದ 16-17ಲಕ್ಷದಲ್ಲಿ ಈ ಮನೆ ನಿರ್ಮಾಣಗೊಂಡಿದೆ.

ಗೇರುಬೀಜದ ಎಣ್ಣೆ, ಟರ್ಪಂಟೈಲ್, ತಿನ್ನರ್ ಬಳಸಿ ವರ್ಷವರ್ಷವೂ ನಿರ್ವಹಣೆ ಮಾಡುವುರಿಂದ ಏಳು ವರ್ಷವಾದರೂ ಮನೆ ಸುಸ್ಥಿತಿಯಲ್ಲಿದೆ‌. ಡಾ.ಮೀರಾ ವಾರಕ್ಕೆರಡು ದಿನ ಈ ಮನೆಯಲ್ಲಿ ಕಾಲ ಕಳೆಯುತ್ತಾರೆ. ಒಟ್ಟಿನಲ್ಲಿ ಪರಿಸರಸ್ನೇಹಿ ಮನೆ ಬೇಕೆನ್ನುವವರು ಇಂತಹ ಮನೆಯನ್ನು ಕಟ್ಟಬಹುದು.

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ- ವಿಶ್ವನಾಥ ಪಂಜಿಮೊಗರು

Edited By : Nagesh Gaonkar
PublicNext

PublicNext

18/09/2024 01:56 pm

Cinque Terre

17.11 K

Cinque Terre

0

ಸಂಬಂಧಿತ ಸುದ್ದಿ