ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ದರ್ಶನ್ ನಂತೆ ನಾನೂ ಇನ್ನೊಂದು ಸಂಬಂಧ ಇಟ್ಟುಕೊಂಡ್ರೆ ತಪ್ಪಾ?" ಅಂದಿದ್ದ ಪತಿ- ನೊಂದ ಗೃಹಿಣಿ ಆತ್ಮಹತ್ಯೆ

ಬೆಂಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಗೃಹಿಣಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನುಷಾ (27) ಮೃತ ಮಹಿಳೆ.

ಸೆಪ್ಟೆಂಬರ್ 5ರಂದು ಮನೆಯ ಬಾತ್ ರೂಮಿನಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅನುಷಾರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಅನುಷಾ‌ ಮೃತಪಟ್ಟಿದ್ದಾರೆ. ಪತಿ ಶ್ರೀಹರಿಯ ಅನೈತಿಕ ಸಂಬಂಧವೇ ಸಾವಿಗೆ ಕಾರಣ ಎಂದು ಅನುಷಾ ಪೋಷಕರು ಆರೋಪಿಸಿದ್ದಾರೆ.

ಬೆಂಗಳೂರಿನ ನಿವಾಸಿ ಅನುಷಾಗೆ ಹತ್ತಿರದ ಸಂಬಂಧದಲ್ಲೇ ಶಿರಸಿ ಮೂಲದ ಶ್ರೀಹರಿ ಎಂಬಾತನೊಂದಿಗೆ 5 ವರ್ಷಗಳ ಹಿಂದೆ ಪೋಷಕರು ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ 2 ವರ್ಷದ ಮಗು ಸಹ ಇದೆ. ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದಲ್ಲಿ ದಂಪತಿ ವಾಸವಿದ್ದರು.

ಮಾರತ್ ಹಳ್ಳಿಯ ಖಾಸಗಿ ಕಂಪೆನಿಯಲ್ಲಿ ಟೀಂ ಲೀಡರ್ ಆಗಿ ಶ್ರೀಹರಿ ಕೆಲಸ ಮಾಡುತ್ತಿದ್ದ. ಮದುವೆಯಾದ ಬಳಿಕ ಶ್ರೀಹರಿಯ ಅನೈತಿಕ ಸಂಬಂಧ, ಬೇರೆ ಮಹಿಳೆಯರೊಂದಿಗಿನ ಅಸಭ್ಯ ಸಂಭಾಷಣೆ, ಅಶ್ಲೀಲ ವೀಡಿಯೋ ಗೀಳಿನ ಬಗ್ಗೆ ತಿಳಿದ ಅನುಷಾ, ಗಂಡನಿಗೆ ಬುದ್ಧಿವಾದ ಹೇಳಿದ್ದಳು. ಆದರೆ, ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಶ್ರೀಹರಿ ಪತ್ನಿಗೆ ದೈಹಿಕವಾಗಿ ಹಿಂಸಿಸುತ್ತಾ ತನ್ನ ಚಾಳಿ ಮುಂದುವರೆಸಿದ್ದ.

ಪತಿಯ ದುರ್ನಡತೆ ಕುರಿತು ತನ್ನ ಪೋಷಕರ ಬಳಿ ಹೇಳಿಕೊಂಡಿದ್ದ ಅನುಷಾ, 'ಠಾಣೆ ಮೆಟ್ಟಿಲೇರುವುದು ಬೇಡ, ಸಂಸಾರವನ್ನು ನಾನೇ ಸರಿಪಡಿಸಿಕೊಳ್ಳುತ್ತೇನೆ' ಎಂದಿದ್ದರು. ಆದರೆ, ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಸಹೋದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಎಂಬ ಕಾರಣಕ್ಕಾಗಿ ಶ್ರೀಹರಿಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

3 ತಿಂಗಳಿಂದ ಮನೆಯಲ್ಲೇ ಇದ್ದ ಶ್ರೀಹರಿ, ಗುರುವಾರ ಸಹ ಅನುಷಾಳೊಂದಿಗೆ ಜಗಳವಾಡುತ್ತಾ ತಾನು ಇನ್ನೊಂದು ಮದುವೆಯಾದರೆ ತಪ್ಪೇನು? ದರ್ಶನ್‌ನೇ ಇನ್ನೊಂದು ಸಂಬಂಧ ಹೊಂದಿಲ್ಲವಾ? ಎಂದು ಹೇಳಿದ್ದಾನಂತೆ. ಜಗಳವಾದ ಬಳಿಕ ಬಾತ್ ರೂಮಿನಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಅನುಷಾ ಬೆಂಕಿ ಹಚ್ಚಿಕೊಂಡಿದ್ದಾರೆ. ಪತ್ನಿ ಬೆಂಕಿ ಹಚ್ಚಿಕೊಂಡಿದ್ದರೂ ರಕ್ಷಣೆಗೆ ಶ್ರೀಹರಿ ತಲೆಕೆಡಿಸಿಕೊಂಡಿರಲಿಲ್ಲ. ಮೊಮ್ಮಗನಿಗೆ ಊಟ ಮಾಡಿಸುತ್ತಿದ್ದ ತಾನೇ ನೆರೆಹೊರೆಯವರ ನೆರವಿನಿಂದ ಬಾಗಿಲು ಮುರಿದು ರಕ್ಷಿಸಲು ಯತ್ನಿಸಿದ್ದೆ ಎಂದು ಅನುಷಾ ತಾಯಿ ರೇಣುಕಾ ಕಣ್ಣೀರಿಟ್ಟಿದ್ದಾರೆ.

ಗಂಭೀರವಾಗಿ ಗಾಯಗೊಂಡ ಅನುಷಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅನುಷಾ ಸಾವನ್ನಪ್ಪಿದ್ದಾರೆ. ಮೃತರ ಪೋಷಕರಿಂದ ದೂರು ಪಡೆದಿರುವ ಹುಳಿಮಾವು ಠಾಣೆ ಪೊಲೀಸರು, ಆರೋಪಿ ಶ್ರೀಹರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Edited By : Nagesh Gaonkar
PublicNext

PublicNext

07/09/2024 06:06 pm

Cinque Terre

67.31 K

Cinque Terre

3

ಸಂಬಂಧಿತ ಸುದ್ದಿ