ಕೇರಳ: ಕೇರಳದಲ್ಲಿ ಬೀದಿ ನಾಯಿಕಾಟ ವಿಪರೀತವಾಗಿದೆ. ಎಲ್ಲೆಂದರಲ್ಲಿ ಓಡಾಡುತ್ತಿರುವ ಬೀದಿ ನಾಯಿಗಳು ಈಗಾಗಲೇ ಹಲವರ ಮೇಲೆ ದಾಳಿ ನಡೆಸಿದೆ. ಬೀದಿ ನಾಯಿಗಳ ಈ ಹಾವಳಿಯಿಂದಾಗಿ ಮನೆಯಿಂದ ಹೊರಗೆ ಹೊರಡುವುದಕ್ಕೂ ಜನ ಭಯ ಪಡುವಂತಾಗಿದೆ. ಹೀಗಿರುವಾಗ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಶಾಲೆಗೆ ಹೋಗುವ ತನ್ನ ಮಕ್ಕಳು ಮತ್ತು ನೆರೆಹೊರೆಯ ಮಕ್ಕಳಿಗೆ ಭದ್ರತೆ ಒದಗಿಸಲು ಏರ್ ಗನ್ ಹಿಡಿದು ರಸ್ತೆಯಲ್ಲಿ ಹೋಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಟಿವಿ ವಾಹಿನಿಯೊಂದರಲ್ಲಿ ಮಾತನಾಡಿದ ಸಮೀರ್ ಎಂಬ ಹೆಸರಿನ ಆ ವ್ಯಕ್ತಿ ನಾನೊಬ್ಬ ಅಪ್ಪ. ನನ್ನ ಮಕ್ಕಳಿಗೆ ರಕ್ಷಣೆ ನೀಡುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ಈ ಊರಲ್ಲಿ ಕೆಲವು ದಿನಗಳಿಂದ ಬೀದಿ ನಾಯಿ ಕಾಟ ಹೆಚ್ಚಾಗಿದ್ದು, ನನ್ನ ಮಕ್ಕಳು ಮತ್ತು ನೆರೆಯ ಮಕ್ಕಳು ನಾಯಿಯ ಭಯದಿಂದಾಗಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು. ಹಾಗಾಗಿ ನಾನು ಬಲವಂತವಾಗಿ ಗನ್ ಹಿಡಿದು ಅವರ ಜತೆ ಹೋಗಬೇಕಾಗಿ ಬಂತು ಎಂದು ಸಮೀರ್ ಹೇಳಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳು ಮದರಸಾಗೆ ಹೋಗಲು, ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದರು. ಹಾಗಾಗಿ ನಾನು ಅವರಿಗೆ ಭದ್ರತೆ ನೀಡಲು ಬಯಸಿದೆ. ನನ್ನ ಮಗ ಈ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದ ಎಂದಿದ್ದಾರೆ ಸಮೀರ್.
ಇಲ್ಲಿನ ಬೇಕಲ್ ನಿವಾಸಿ ಆಗಿರುವ ಸಮೀರ್, ಏರ್ ಗನ್ಗೆ ಪರವಾನಗಿ ಅಗತ್ಯವಿಲ್ಲ ಎಂದಿದ್ದಾರೆ. ನಾನು ಯಾವುದೇ ನಾಯಿಯನ್ನು ಕೊಂದಿಲ್ಲ. ಹಾಗಾಗಿ ನಾನು ಕಾನೂನು ಕ್ರಮಕ್ಕೆ ಹೆದರುವುದಿಲ್ಲ. ಆದರೆ ಯಾವುದೇ ನಾಯಿ ದಾಳಿ ಮಾಡಿದರೆ, ಆತ್ಮರಕ್ಷಣೆಗಾಗಿ ನಾನು ಅದನ್ನು ಶೂಟ್ ಮಾಡಬೇಕಾಗುತ್ತದೆ ಎಂದು ವ್ಯಕ್ತಿ ಹೇಳಿದ್ದಾರೆ.
ಬೀದಿ ಮತ್ತು ಸಾಕು ನಾಯಿಗಳಿಗೆ ಲಸಿಕೆ ಹಾಕಲು ಮತ್ತು ಹೆಚ್ಚಿನ ಪ್ರಾಣಿ ಜನನ ನಿಯಂತ್ರಣ ಕೇಂದ್ರಗಳನ್ನು ತೆರೆಯಲು ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 20 ರವರೆಗೆ ರಾಜ್ಯಾದ್ಯಂತ ಸಾಮೂಹಿಕ ಲಸಿಕೆ ಅಭಿಯಾನವನ್ನು ಸರ್ಕಾರ ಘೋಷಿಸಿದೆ.
PublicNext
16/09/2022 10:59 pm