ಕಾರವಾರ (ಉತ್ತರ ಕನ್ನಡ): ಸರ್ಕಾರಿ ಆಂಬ್ಯುಲೆನ್ಸ್‌ಗಳ ಸೇವೆ ಮುಂದುವರೆದ ದೇಶದಲ್ಲಿ ಯಾವ ರೀತಿ ಇದೆಯೋ ಆ ರೀತಿ ಸೇವೆ ನೀಡುವುದು ಹೇಗೆ ಎಂದು ವರದಿ ನೀಡಲು ತಾಂತ್ರಿಕ ಸಲಹಾ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿ ನೀಡಿದ ವರದಿಯ ಮೇಲೆ ಟೆಂಡರ್ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
108 ತುರ್ತು ಸೇವೆಯಲ್ಲಿ ಸಮಸ್ಯೆ ಆಗುತ್ತಿರುವ ಹಿನ್ನಲೆ ಕಾರವಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಂದೆ ಇಂತಹ ಸಮಸ್ಯೆ ಆಗದಂತೆ ಮಾದರಿ ತುರ್ತು ಆಂಬ್ಯುಲೆನ್ಸ್ ಸೇವೆ ರಾಜ್ಯದಲ್ಲಿ ನೀಡಲಾಗುವುದು ಎಂದರು.
108 ತುರ್ತು ಆಂಬ್ಯುಲೆನ್ಸ್ ಸೇವೆ 2006- 07ರಲ್ಲಿ ಪ್ರಾರಂಭವಾಗಿತ್ತು. ಆಗ ಟೆಂಡರ್ ಮೂಲಕ ನಿರ್ವಹಣೆಗೆ ನೀಡಿರಲಿಲ್ಲ. ಸತ್ಯಂ ಎನ್ನುವ ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿತ್ತು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ನಂತರ ಜಿ.ವಿ.ಕೆ ಸಂಸ್ಥೆಗೆ ನಿರ್ವಹಣೆಗೆ ನೀಡಲಾಗಿದೆ. ಆದರೆ ಇತ್ತೀಚಿಗೆ ಈ ಸಂಸ್ಥೆ ಸೇವೆ ಸರಿಯಾಗಿ ನೀಡುತ್ತಿಲ್ಲ ಎಂದರು.
ಕಳೆದ ಎರಡು ತಿಂಗಳಿಂದ ಜಿವಿಕೆ ಸಂಸ್ಥೆ ಸಿಬ್ಬಂದಿಗೆ ವೇತನ ನೀಡಿಲ್ಲ. ಸರ್ಕಾರ ಸಂಸ್ಥೆಗೆ ಅನುದಾನ ನೀಡಿದೆ. ಒಂದೂವರೆ- ಎರಡು ತಿಂಗಳಲ್ಲಿ ಎಲ್ಲಾ ಸಮಸ್ಯೆ ಈಡೇರಲಿದೆ. ಅಲ್ಲಿಯವರೆಗೆ ಜನರಿಗೆ ಯಾವುದೇ ಸಮಸ್ಯೆ ಆಗದಂತೆ ರಾಜ್ಯದಲ್ಲಿ ಆಂಬ್ಯುಲೆನ್ಸ್ ಸೇವೆ ನೀಡಲಾಗುವುದು ಎಂದರು.
PublicNext
11/10/2022 01:32 pm