ಕಾರವಾರ (ಉತ್ತರಕನ್ನಡ): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹಾಟ್ ಟಾಪಿಕ್ ಆಗಿದ್ದ ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣವನ್ನ ಈ ಬಾರಿ ಕಾಂಗ್ರೆಸ್ ಮುನ್ನೆಲೆಗೆ ತಂದಿದೆ. ಐದು ವರ್ಷ ಕಳೆದರೂ, ರಾಜ್ಯ- ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿಲ್ಲ ಎಂಬುದನ್ನ ಕೆದುಕಲಾರಂಭಿಸಿದೆ.
2017ರಲ್ಲಿ ಹೊನ್ನಾವರದಲ್ಲಿ ನಡೆದಿದ್ದ ಗಲಭೆಯಲ್ಲಿ ನಾಪತ್ತೆಯಾಗಿದ್ದ ಪರೇಶ್ ಮೇಸ್ತಾ ಎನ್ನುವ ಯುವಕ, ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ. ಕೋಮು ದ್ವೇಷದಿಂದಲೇ ಕೊಲೆ ಮಾಡಿರುವುದಾಗಿ ಬಿಜೆಪಿ ನಾಯಕರು, ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದರು. ಅಂದಿನ ಕಾಂಗ್ರೆಸ್ ಸರ್ಕಾರಕ್ಕೂ ಈ ಪ್ರಕರಣ ಮುಜುಗರ ತಂದಿತ್ತು. ನಂತರದ ಬೆಳವಣಿಗೆಯಲ್ಲಿ ಸಿಬಿಐ ತನಿಖೆಗೆ ಈ ಪ್ರಕರಣವನ್ನ ವಹಿಸಲಾಗಿತ್ತು. ಸದ್ಯ ಇದೇ ಪ್ರಕರಣ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಜೀವ ಪಡೆದುಕೊಂಡಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಪ್ರಕರಣವನ್ನ ಮುನ್ನೆಲೆಗೆ ತಂದಿದೆ.
ಇನ್ನು ಪರೇಶ್ ಮೇಸ್ತಾ ಸಾವಿನ ನಂತರ ಮಣಿಪಾಲಿನ ವೈದ್ಯರು ನಡೆಸಿದ್ದ ಮರಣೋತ್ತರ ಪರೀಕ್ಷಾ ವರದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಹಜ ಸಾವು ಎಂದು ವರದಿಯಲ್ಲಿದೆ. ಆದರೂ ಬಿಜೆಪಿ ಇದನ್ನ ಒಪ್ಪಿಕೊಳ್ಳಲು ಮುಂದಾಗುತ್ತಿಲ್ಲ. ಮಣಿಪಾಲ್ ವೈದ್ಯರೇ ಸುಳ್ಳು ಮರಣೋತ್ತರ ಪರೀಕ್ಷೆ ವರದಿ ನೀಡಿದ್ದರೆ ಅವರ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲಿಸಲಿ. ಅದನ್ನ ಬಿಟ್ಟು ಪ್ರಕರಣ ಇನ್ನು ಜೀವಂತ ಇಟ್ಟು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿಗರ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ಕಳೆದ ಬಾರಿ ಪರೇಶ್ ಸಾವಿನ ಲಾಭ ಪಡೆದಿದ್ದ ಬಿಜೆಪಿಗೆ ಇನ್ನೂ ಪ್ರಕರಣ ಇತ್ಯರ್ಥವಾಗದಿರುವುದು ಈ ಬಾರಿ ಮುಳುವಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್ ಈ ಪ್ರಕರಣವನ್ನ ಹೇಗೆ ಜನರ ಬಳಿ ತೆರೆಡಿಡುತ್ತೆ, ಬಿಜೆಪಿ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತದೆ ಎಂಬುದರ ಮೇಲೆ ಸದ್ಯ ಮುಂಬಲಿರುವ ಚುನಾವಣೆ ನಿಂತಿದೆ ಎನ್ನಬಹುದಾಗಿದೆ.
PublicNext
02/10/2022 02:34 pm