ಕಾರವಾರ (ಉತ್ತರ ಕನ್ನಡ): ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಳಿಯಾಳದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಧರಣಿ ಸಂಬಂಧ, ಬೆಳೆಗಾರರ ಸಮಸ್ಯೆಗಳನ್ನು ಆಲಿಸಲು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತ ಶಿವಾನಂದ ಕಲಕೇರಿ, ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಬ್ಬು ಬೆಳೆಗಾರರ ಮುಖಂಡರು ಹಾಗೂ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯಲ್ಲಿ ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗಡೆ, ರೈತ ಮುಖಂಡರಾದ ಅಶೋಕ್ ಮೇಟಿ, ನಾಗೇಂದ್ರ ಜೀವೋಜಿ, ಕಾಜಗಾರ, ಸುಭಾಷ್ ಕೊರ್ವೇಕರ್, ಗಣಪತಿ ಕರಂಜೇಕರ್ ಮುಂತಾದವರು ಸಭೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಬ್ಬಿನ ರಿಕವರಿ ಬರುತ್ತಿಲ್ಲವೆಂದು ಎಫ್‌ಆರ್‌ಪಿ ದರ ಕಡಿಮೆಯಾಗಿದೆ ಎಂದು ಕಾರ್ಖಾನೆಯವರು ಹೇಳುತ್ತಿದ್ದಾರೆ. ಎಫ್‌ಆರ್‌ಪಿ ಕಳೆದ ವರ್ಷಗಿಂತ ಹೆಚ್ಚಾಗಬೇಕು. ಕಟಾವು ಮತ್ತು ಸಾಗಾಣಿಕೆ ವೆಚ್ಚದಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರೈತರಿಗೆ ಪ್ಲಾಂಟೇಶನ್ ಬಿಲ್ ನೀಡಬೇಕು. ಕಟಾವು ಯಾದಿಯನ್ನು ಪ್ರಕಟಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ರೈತ ಮುಖಂಡರುಗಳು ಸಭೆಯ ಮುಂದಿಟ್ಟರು.
ಅಂತಿಮವಾಗಿ ಸಭೆಯ ಬಳಿಕ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಆಯುಕ್ತ ಶಿವಾನಂದ ಕಲಕೇರಿ, ಎಫ್.ಆರ್.ಪಿ ದರವನ್ನು ನಿಗಧಿಪಡಿಸುವ ಪರಮಾಧಿಕಾರ ಇರೋದು ಕೇಂದ್ರ ಸರ್ಕಾರಕ್ಕೆ ಮಾತ್ರ. ಎಸ್‌ಎಪಿಗೆ ಸಂಬಂಧಿಸಿದಂತೆ ಹಲವಾರು ರೈತ ಮುಖಂಡರು ಈಗಾಗಲೇ ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದು, ಮುಖ್ಯಮಂತ್ರಿಯವರು ಸಕ್ಕರೆ ಸಚಿವರಿಗೆ ನಿರ್ದೇಶನ ನೀಡಿದ್ದಾರೆ. ಈ ಕುರಿತು ಅ.15ರಂದು ಎಲ್ಲ ರೈತ ಮುಖಂಡರ ಜೊತೆ ಸಭೆ ನಡೆಸಿ, ಈ ವಿಷಯದ ಕುರಿತು ಚರ್ಚೆ ನಡೆಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
PublicNext
13/10/2022 08:14 pm