ಕಾರವಾರ (ಉತ್ತರ ಕನ್ನಡ): ಕಾರವಾರ ತಾಲೂಕಿನ ಕೈಗಾದಲ್ಲಿ ಅಣು ವಿದ್ಯುತ್ ನ 5 ಮತ್ತು 6ನೇ ಘಟಕಗಳ ಸ್ಥಾಪನೆಗೆ ಅಣು ವಿದ್ಯುತ್ ನಿಗಮಕ್ಕೆ ನೀಡಿದ್ದ ಪರಿಸರ ಅನುಮತಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕಾರ್ಯವಿಧಾನದ ಲೋಪ ಉಲ್ಲೇಖಿಸಿ ಅಮಾನತುಗೊಳಿಸಿದೆ. ಇದು ಸ್ಥಳೀಯರ ಹರ್ಷಕ್ಕೆ ಕಾರಣವಾಗಿದ್ದು, ಮತ್ತೆ ಅನುಮತಿಗಾಗಿ ಪುನರ್ ಪರಿಶೀಲನೆ ನಡೆಸಬಾರದು ಎಂಬ ಒತ್ತಾಯ ಕೇಳಿಬಂದಿದೆ.
ಈ ಹಿಂದಿನಿಂದಲೂ ಕೈಗಾದಲ್ಲಿ ಅಣು ವಿದ್ಯುತ್ ಘಟಕಗಳ ವಿಸ್ತರಣೆಗೆ ಸಾರ್ವಜನಿಕರ ವಿರೋಧವಿದ್ದು, ಅನೇಕ ಹೋರಾಟಗಳೂ ನಡೆದಿತ್ತು. ಆದರೂ ಅಣು ವಿದ್ಯುತ್ ನಿಗಮ ತನ್ನ ಹಠಮಾರಿ ಧೋರಣೆ ಮುಂದುವರಿಸಿ, ಸಾರ್ವಜನಿಕರ ವಿರೋಧದ ನಡುವೆಯೂ 5 ಮತ್ತು 6ನೇ ಘಟಕ ಸ್ಥಾಪನೆಗೆ 2019ರ ಆಗಸ್ಟ್ ನಲ್ಲಿ ಪರಿಸರ ಅನುಮತಿ ಪಡೆದುಕೊಂಡಿತ್ತು.
ಆದರೆ, ಈ ಅನುಮತಿಯನ್ನು ನ್ಯಾಯಮೂರ್ತಿ ಕೆ.ರಾಮಕೃಷ್ಣನ್ ಮತ್ತು ಸತ್ಯಗೋಪಾಲ್ ಕೊರ್ಲಪಾಟಿ ಅವರನ್ನೊಳಗೊಂಡ ಎನ್‌ಜಿಟಿ ದಕ್ಷಿಣ ಪೀಠವು ಇದೀಗ ಅಮಾನತುಗೊಳಿಸಿ ಆದೇಶಿಸಿದೆ. ಸದ್ಯ ನಿರಾಕರಿಸಿರುವ ಅನುಮತಿಯನ್ನು ಮತ್ತೆ ಪುನರ್ ಪರಿಶೀಲಿಸಲು ಕೊಡಲೇ ಬಾರದು ಎಂಬ ಆಗ್ರಹ ಸ್ಥಳೀಯರು ಹಾಗೂ ಸಾಮಾಜಿಕ ಹೋರಾಟಗಾರರಿಂದ ವ್ಯಕ್ತವಾಗಿದೆ.
ಇನ್ನು, ಕೈಗಾದಲ್ಲಿ ಈಗಾಗಲೇ 4 ಅಣು ವಿದ್ಯುತ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದರೂ ಇದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನಗಳು ಸಿಗುತ್ತಿಲ್ಲ ಎಂಬ ಆರೋಪವಿದೆ. ಜತೆಗೆ ಈ ಘಟಕಗಳಿಂದಾಗಿ ಪರಿಸರ, ಮಾನವರ ಮೇಲಾಗುತ್ತಿರುವ ದುಷ್ಪರಿಣಾಮ ಬಗ್ಗೆ ಸಂಬಂಧಪಟ್ಟವರು ಯಾವುದೇ ಲಕ್ಷ್ಯ ವಹಿಸುತ್ತಿಲ್ಲ. ಹೀಗಾಗಿ ಹಸಿರು ಪೀಠದ ಆದೇಶವನ್ನು ತುಂಬು ಮನಸ್ಸಿನಿಂದ ಸ್ವಾಗತಿಸಿರುವ ಸ್ಥಳೀಯರು, ಯಾವುದೇ ಕಾರಣಕ್ಕೂ ಕೈಗಾದಲ್ಲಿ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದಾರೆ.
PublicNext
12/10/2022 09:52 pm