ಕಾರವಾರ (ಉತ್ತರಕನ್ನಡ): ಸ್ವಚ್ಛತೆಯ ಪಾಠ ಹೇಳುವ ಉತ್ತರಕನ್ನಡ ಜಿಲ್ಲಾ ಪಂಚಾಯತಿಯ ಸುತ್ತಮುತ್ತಲೇ ಮಲಿನತೆ ಮನೆ ಮಾಡಿದ್ದು, ಜನ ಮೂಗು ಮುಚ್ಚಿ ತಿರುಗಾಡುವ ಪರಿಸ್ಥಿತಿ ಇದೆ.
ಹೌದು, ಜಿಲ್ಲಾ ಪಂಚಾಯತಿಯ ಪಕ್ಕದ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್ ಹೋಲ್ ಒಂದನ್ನು ನಿರ್ಮಿಸಲಾಗಿದ್ದು, ಈ ಮ್ಯಾನ್ ಹೋಲ್ ನಿಂದ ಕಳೆದ ಎರಡ್ಮೂರು ವರ್ಷಗಳಿಂದಲೂ ಮಲಿನ ನೀರು ಉಕ್ಕಿ ರಸ್ತೆಯ ಮೇಲೆ ಹರಿಯುತ್ತಲೇ ಇದೆ. ಜಿಲ್ಲಾ ಪಂಚಾಯತಿಯ ಹಿಂಭಾಗದಲ್ಲಿನ ಹಲವು ಅಪಾರ್ಟ್ಮೆಂಟ್ ಗಳು ಮಲಿನ ನೀರನ್ನು ನೇರವಾಗಿ ಸಾರ್ವಜನಿಕ ಚರಂಡಿಗೆ ಬಿಡುತ್ತಿದ್ದು, ಈ ನೀರು ಕೂಡ ಸರಾಗವಾಗಿ ಹರಿಯದೇ ಚರಂಡಿಯಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿಯಾಗ್ತಿದೆ.
ಅಸಲಿಗೆ ಕಾರವಾರದ ಅನೇಕ ಅಪಾರ್ಟ್ಮೆಂಟ್ ಗಳಲ್ಲಿ ನಿಯಮಗಳ ಪ್ರಕಾರ ಸೆಪ್ಟಿಕ್ ಟ್ಯಾಂಕ್ ಗಳನ್ನ ನಿರ್ಮಿಸಿಕೊಂಡಿಲ್ಲ. ಹೀಗಾಗಿ ಮಲಿನ ನೀರನ್ನ ಚರಂಡಿಗಳಿಗೆ ಬಿಡಲಾಗುತ್ತಿದ್ದು, ಇದರಿಂದಾಗಿ ನಗರದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಪ್ರಮುಖ ಸರ್ಕಾರಿ ಕಚೇರಿಗಳಿರುವ ರಸ್ತೆಗೆ ಈ ಮಲಿನ ನೀರುಕ್ಕುವ ಮ್ಯಾನ್ ಹೋಲ್ ಇರುವ ರಸ್ತೆಯ ಸಂಪರ್ಕವಿದೆ. ಮಳೆಗಾಲದಲ್ಲಂತೂ ರಸ್ತೆ ತುಂಬೆಲ್ಲ ಈ ಮಲಿನ ನೀರು ಹರಡಿಕೊಂಡಿರುತ್ತದೆ. ಈ ಭಾಗದಲ್ಲಿ ತಿರುಗಾಡಲು ಅಸಹ್ಯ ಪಡುವಂತಿದ್ದು, ಗಬ್ಬುವಾಸನೆ ಹೊಡೆಯುತ್ತಿದೆ. ಹೀಗಿದ್ದಾಗ್ಯೂ ಕಳೆದ ಎರಡ್ಮೂರು ವರ್ಷಗಳಿಂದ ಈ ಸಮಸ್ಯೆ ಬಗೆಹರಿಯದಿರುವುದು ಸಾಮಾಜಿಕ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ.
PublicNext
08/10/2022 03:54 pm