ಕಾರವಾರ: ಕುಮಟಾ ತಾಲೂಕಿನ ಹೊಳೆಗದ್ದೆ ಟೋಲ್ ನಲ್ಲಿ ರಾಜ್ಯದಲ್ಲಿಯೇ ಅಧಿಕ ದರದ ಟೋಲ್ ಸಂಗ್ರಹಿಸುತ್ತಿದ್ದು, ಜನಪ್ರತಿನಿಧಿಗಳು ಮಾತ್ರ ಕಣ್ಣಿದ್ದು ಕುರುಡಂತೆ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಭಾಸ್ಕರ್ ಪಟಗಾರ್ ಕಿಡಿಕಾರಿದ್ದಾರೆ.
ಹೊಳೆಗದ್ದೆಯ ಐ.ಆರ್.ಬಿ ಟೋಲ್‌ನಲ್ಲಿ ರಾಜ್ಯದ ವಿವಿಧ ಟೋಲ್ ಗಳಿಗೆ ಹೋಲಿಸಿದರೆ ದುಪ್ಪಟ್ಟು ಸುಂಕ ವಸೂಲಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇನ್ನೂ ಕಾಮಗಾರಿ ಮುಗಿದಿಲ್ಲ. ಆದರೂ ಟೋಲ್ ಸಂಗ್ರಹಿಸಿ ಹಗಲು ದರೋಡೆಯನ್ನ ಐ.ಆರ್.ಬಿ ಮಾಡುತ್ತಿದೆ ಎಂದಿದ್ದಾರೆ.
ಕಾರಿನಲ್ಲಿ ಸಾಗುವವರಿಗೆ ತಿಂಗಳಿಗೆ ದುಬಾರಿ ಹಣ ಕಟ್ಟಿ ಪಾಸ್ ಪಡೆಯುವಂತೆ ಬೋರ್ಡ್ ಹಾಕಲಾಗಿದೆ. ಜನಪ್ರತಿನಿಧಿಗಳು ಟೋಲ್ ಬಳಿ ಬಂದು ಸುಮ್ಮನೇ ನೋಡಿ ವಾಪಾಸ್ ಹೋಗುತ್ತಿದ್ದು, ಯಾರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಇಷ್ಟೊಂದು ದುಬಾರಿ ಬೆಲೆಯನ್ನ ಕೂಡಲೇ ಕಡಿಮೆ ಮಾಡದಿದ್ದರೆ ಮುಂದಿನ ವಾರ ಟೋಲ್ ಗೆ ನುಗ್ಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಭಾಸ್ಕರ್ ಪಟಗಾರ್ ಎಚ್ಚರಿಸಿದ್ದಾರೆ.
PublicNext
21/09/2022 10:41 pm