ಕಾರವಾರ (ಉತ್ತರಕನ್ನಡ): ಸಕ್ಕರೆ ಆಯುಕ್ತರ ಸಭೆಯಿಂದಾಗಿ ಹಳಿಯಾಳದ ಕಬ್ಬು ಬೆಳೆಗಾರರ 17 ದಿನಗಳ ಹೋರಾಟ ಜಯದ ಹಂತಕ್ಕೆ ಬಂದು ತಲುಪಿದೆ. ಹೀಗಾಗಿ ಪ್ರತಿಭಟನೆ ಹಿಂಪಡೆದು ತಮ್ಮ ಕೆಲಸಗಳಿಗೆ ಮರಳಿ. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಸರ್ಕಾರದಿಂದ ಸಿಹಿ ಸುದ್ದಿ ಸಿಗಲಿದೆ ಎಂದು ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಕಿವಿ ಮಾತು ಹೇಳಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಅವರು, ಎಚ್ ಆ್ಯಂಡ್ ಟಿಯಲ್ಲಿ ಮೋಸವಾಗುತ್ತಿದೆ ಎಂಬ ಸಂಶಯ ರೈತರದ್ದಾಗಿತ್ತು. ಎಚ್ ಆ್ಯಂಡ್ ಟಿ ಹೆಚ್ಚಾಗಿದೆ ಎಂದು ಆಯುಕ್ತರೂ ಒಪ್ಪಿಕೊಂಡಿದ್ದಾರೆ. ಇಐಡಿ ಪ್ಯಾರಿ ಕಂಪನಿಯ ಹಳಿಯಾಳ, ರಾಮದುರ್ಗ, ಬಾಗಲಕೋಟ ಕಾರ್ಖಾನೆಗಳಲ್ಲಿನ ಎಚ್ ಆ್ಯಂಡ್ ಟಿಯನ್ನ ಆಡಿಟ್ ಮಾಡುತ್ತೇವೆ. ಸರ್ಕಾರದ ದರಕ್ಕಿಂತ ಹೆಚ್ಚಿಗೆ ಪಡೆದಿದ್ದರೆ ಅದನ್ನು ಮತ್ತೊಮ್ಮೆ ಮರು ಭರಣ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ. ಎಫ್‌ಆರ್‌ಪಿ ದರ ಮರು ಪರಿಷ್ಕರಿಸಿ ಎಸ್‌ಎಪಿ ದರ ಕೊಟ್ಟು ರೈತರಿಗೆ ಹೆಚ್ಚಿನ ಬೆಲೆಯನ್ನು ಕೂಡಲೇ ನಿರ್ಧಾರ ಮಾಡಬೇಕು. ಎಚ್ ಆ್ಯಂಡ್ ಟಿ ಆಡಿಟ್ ರಿಪೋರ್ಟ್ ಶೀಘ್ರ ಪಡೆದು, ರೈತರಿಗೆ ಆದ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯಾವುದೇ ವಸ್ತುವನ್ನು ಬಹಳ ಎಳೆದರೆ ಸರಿಯಾಗುವುದಿಲ್ಲ ಎಂಬುದನ್ನು ಹಳಿಯಾಳದಲ್ಲಿ ಪ್ರತಿಭಟನಾ ನಿರತ ರೈತರು ಅರ್ಥ ಮಾಡಿಕೊಳ್ಳಬೇಕು. ರೈತರು ದೇಶಕ್ಕೆ ಅನ್ನ ಹಾಕುವವರು. ಅವರು ರಸ್ತೆಯ ಮೇಲೆ ಬಂದು ನಿಂತುಕೊಂಡರೂ ಸರಿ ಕಾಣುವುದಿಲ್ಲ. ಕೇಂದ್ರ- ರಾಜ್ಯ ಸರ್ಕಾರ ಯಾವತ್ತೂ ರೈತರ ಪರವಾಗಿರುತ್ತದೆ ಎಂದರು.
PublicNext
13/10/2022 08:16 pm